ಸಿಎಂ ಸ್ಥಾನಕ್ಕೆ ಅರವಿಂದ್‌ ಕೇಜ್ರಿವಾಲ್ ರಾಜೀನಾಮೆ | ಸರಕಾರ ರಚನೆಗೆ ಅತಿಶಿ ಹಕ್ಕು ಮಂಡನೆ

Update: 2024-09-17 15:08 GMT

ಅರವಿಂದ್ ಕೇಜ್ರಿವಾಲ್ , ಅತಿಶಿ , ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ | PC : PTI 

ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಅವರು ತನ್ನ ರಾಜೀನಾಮೆ ಪತ್ರವನ್ನು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ಸಲ್ಲಿಸಿದರು.ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವ ತನಕ ಹುದ್ದೆಯಲ್ಲಿ ಮುಂದುವರಿಯುವಂತೆ ಕೇಜ್ರಿವಾಲ್ ಅವರಿಗೆ ರಾಜ್ಯಪಾಲರು ಸೂಚಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಿಯೋಜಿತ ಮುಖ್ಯಮಂತ್ರಿ ಅತಿಶಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ನೂತನ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ ಹಾಗೂ ತನಗೆ ಬೆಂಬಲವನ್ನು ಘೋಷಿಸಿರುವ ಅಪ್ ಶಾಸಕರ ಪಟ್ಟಿಯನ್ನು ಅವರು ಸಲ್ಲಿಸಿದ್ದಾರೆ.

ದಿಲ್ಲಿ ಅಬಕಾರಿ ನೀತಿಯಲ್ಲಿ ಅಕ್ರಮಗಳು ನಡೆದಿರುವ ಆರೋಪಗಳಿಗೆ ಸಂಬಂಂಧಿಸಿ ಬಂಧಿತರಾಗಿದ್ದ ಅರವಿಂದ್‌ ಕೇಜ್ರಿವಾಲ್ ಅವರು ಕಳೆದ ವಾರ ಜಾಮೀನು ಬಿಡುಗಡೆಗೊಂಡ ಬಳಿಕ ತನ್ನ ರಾಜೀನಾಮೆಯನ್ನು ಘೋಷಿಸಿದ್ದರು. ತಮ್ಮನ್ನು ಪ್ರಾಮಾಣಿಕರೆಂದು ಜನತೆ ಮತದಾನದ ಮೂಲಕ ತೀರ್ಪು ನೀಡಿದಾಗ ಮಾತ್ರವೇ ತಾನು ಮುಖ್ಯಮಂತ್ರಿಯಾಗುತ್ತೇನೆ ಹಾಗೂ ಮನೀಶ್ ಸಿಸೋಡಿಯಾ ಉಪಮುಖ್ಯಮಂತ್ರಿಯಾಗಲಿದ್ದಾರೆಂದು ಕೇಜ್ರಿವಾಲ್ ಹೇಳಿದ್ದರು. ದಿಲ್ಲಿ ವಿಧಾನಸಭೆಗೆ ಅವಧಿಗೆ ಮುನ್ನ ಚುನಾವಣೆ ನಡೆಸುವಂತೆಯೂ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News