ಆರೆಸ್ಸೆಸ್ ಮತ್ತು ಪ್ರಧಾನಿ ಮೋದಿಯಿಂದ ಹಿಂದೂ-ಮುಸ್ಲಿಮರಿಗೆ ಅಪಾಯ: ಅಸದುದ್ದೀನ್ ಉವೈಸಿ

Update: 2024-10-07 11:57 GMT

ಅಸದುದ್ದೀನ್ ಉವೈಸಿ(PTI) , ನರೇಂದ್ರ ಮೋದಿ(PC : X)

ಹೈದರಾಬಾದ್: ಆಂತರಿಕ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕುವ ಮೂಲಕ ಹಿಂದೂ ಸಮಾಜವು ಅದರ ಸುರಕ್ಷತೆಗಾಗಿ ಒಂದಾಗಬೇಕು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ, ದೇಶದಲ್ಲಿ ಐಕ್ಯವಾಗಿರುವ ಹಿಂದೂಗಳು, ಮುಸ್ಲಿಮರು ಮತ್ತು ಇತರರಿಗೆ ಅಪಾಯವನ್ನುಂಟು ಮಾಡುವುದು ಆರೆಸ್ಸೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಎಂದು ಆರೋಪಿಸಿದ್ದಾರೆ.

ರವಿವಾರ ರಾತ್ರಿ ತೆಲಂಗಾಣದ ನಿಝಾಮಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂಗಳಿಗೆ ಅಥವಾ ಮುಸ್ಲಿಮರಿಗೆ ಯಾವುದೇ ಅಪಾಯವಿಲ್ಲ. ಮುಸ್ಲಿಮರು, ಹಿಂದೂಗಳು, ದಲಿತರು, ಆದಿವಾಸಿಗಳು, ಸಿಖ್ಖರು, ಕ್ರಿಶ್ಚಿಯನ್ನರಿಗೆ ಅಪಾಯ ಇರುವುದು ನರೇಂದ್ರ ಮೋದಿ ಮತ್ತು ಮೋಹನ್ ಭಾಗವತ್ ಅವರಿಂದ ಎಂದು ಅವರು ಹೇಳಿದರು.

ಭಾರತವು ಹಿಂದೂ ರಾಷ್ಟ್ರ ಎಂದು ಪ್ರತಿಪಾದಿಸಿದ ಭಾಗವತ್, ಭಾಷೆ, ಜಾತಿ ಮತ್ತು ಪ್ರಾದೇಶಿಕ ವಿವಾದಗಳಲ್ಲಿನ ವ್ಯತ್ಯಾಸಗಳನ್ನು ತೊಡೆದುಹಾಕುವ ಮೂಲಕ ಹಿಂದೂ ಸಮಾಜವು ತನ್ನ ಭದ್ರತೆಗಾಗಿ ಒಗ್ಗೂಡಬೇಕು ಎಂದು ಹೇಳಿದ್ದರು.

ಶನಿವಾರ ಸಂಜೆ ರಾಜಸ್ಥಾನದ ಬರಾನ್‌ನಲ್ಲಿ ನಡೆದ 'ಸ್ವಯಂಸೇವಕ ಏಕತ್ರಿಕರಣ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೂಗಳು ಪ್ರತಿಯೊಬ್ಬರನ್ನು ತಮ್ಮವರೆಂದು ಪರಿಗಣಿಸುತ್ತಾರೆ ಮತ್ತು ಎಲ್ಲರನ್ನೂ ಅಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದರು.

ಮೋದಿ ತಮ್ಮ ಆಡಳಿತದಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ಇತರರಿಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ ಎಐಎಂಐಎಂ ಅಧ್ಯಕ್ಷರು, ಜಾರ್ಖಂಡ್‌ನಲ್ಲಿ ಜನಸಂಖ್ಯಾ ಬದಲಾವಣೆಗಳ ಬಗ್ಗೆ ಮೋದಿ ಮಾತನಾಡುತ್ತಾರೆ, ಆದರೆ ದೇಶವು ನಿರುದ್ಯೋಗದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.

ಚೀನಾ ದೇಶದ 2,000 ಚದರ ಕಿಲೋಮೀಟರ್ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಪ್ರತಿಪಾದಿಸಿದ ಅವರು, ಭಾಗವತ್ ಅದರ ಬಗ್ಗೆ ಮೌನವಾಗಿದ್ದಾರೆ ಎಂದು ಆರೋಪಿಸಿದರು.

ಇಸ್ರೇಲ್ ನ ಬೆಂಜಮಿನ್ ನೆತನ್ಯಾಹು ಮೇಲೆ ಒತ್ತಡ ಹಾಕಿ ಕದನ ವಿರಾಮಕ್ಕಾಗಿ ಕೆಲಸ ಮಾಡಲು ಪ್ರಧಾನಿ ಮೋದಿಯನ್ನು ಉವೈಸಿ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News