ಡಿಸೆಂಬರ್ 2019ರ ಮೊದಲಿನ ನೇಮಕಾತಿ ಪದ್ಧತಿಗೆ ಮರಳಿದ ರೈಲ್ವೆ ಇಲಾಖೆ

Update: 2024-10-07 10:38 GMT

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ: ಎಂಟು ಸೇವೆಗಳನ್ನು ಒಂದರಲ್ಲಿ (ಐಆರ್‌ಎಂಎಸ್) ವಿಲೀನಗೊಳಿಸಲು ಭಾರತೀಯ ರೈಲ್ವೆಯಲ್ಲಿ ಅತಿ ದೊಡ್ಡ ಮಾನವ ಶಕ್ತಿ ಸುಧಾರಣೆಗೆ ಸಂಪುಟವು ಒಪ್ಪಿಗೆ ನೀಡಿದ ಸುಮಾರು ಐದು ವರ್ಷಗಳ ಬಳಿಕ ಸರಕಾರವು ಡಿಸೆಂಬರ್ 2019ರ ಮೊದಲಿನ ನೇಮಕಾತಿ ಪದ್ದತಿಗೇ ಮರಳಿದೆ. ಈ ವರ್ಷದಿಂದ ಯುಪಿಎಸ್‌ಸಿ ನಡೆಸುವ ಎರಡು ಪ್ರತ್ಯೇಕ ಪರೀಕ್ಷೆ(ಸಿವಿಲ್ ಮತ್ತು ಇಂಜಿನಿಯರಿಂಗ್)ಗಳ ಮೂಲಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದು ರೈಲ್ವೆ ಅಧಿಕಾರಶಾಹಿಯಲ್ಲಿ ವಿಭಾಗೀಕರಣಕ್ಕೆ ಅಂತ್ಯ ಹಾಡುವ ಪ್ರಯತ್ನಗಳ ಅಂಗವಾಗಿ ಸರಕಾರವು ಡಿಸೆಂಬರ್ 2019ರಲ್ಲಿ ಒಪ್ಪಿಗೆ ನೀಡಿದ್ದ ನೀತಿಯಿಂದ ಸಂಪೂರ್ಣ ವಿಮುಖತೆಯಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ಭಾರತೀಯ ರೈಲ್ವೆ ವ್ಯವಸ್ಥಾಪನಾ ಸೇವೆ(ಐಆರ್‌ಎಂಎಸ್)ಯಿಂದ ಸಾಕಷ್ಟು ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವಲ್ಲಿ ರೈಲ್ವೆಯು ಹೆಣಗಾಡಿರುವ ಹಿನ್ನೆಲೆಯಲ್ಲಿ ಇಲಾಖೆಯು ಮತ್ತೆ ಹಿಂದಿನ ನೇಮಕಾತಿ ಪದ್ಧತಿಗೇ ಮರಳುತ್ತಿದೆ. ಸಿವಿಲ್ ಸರ್ವಿಸಸ್ ಪರೀಕ್ಷೆ (ಸಿಎಸ್‌ಇ) 2025ರ ಮೂಲಕ 225 ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ರೈಲ್ವೆಯು ಬಯಸಿದ್ದು,ಅದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಿದೆ.

ಶನಿವಾರ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ)ಯು ಸಚಿವಾಲಯದಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳ ವಿಶಿಷ್ಟ ಅಗತ್ಯಗಳನ್ನು ಪರಿಗಣಿಸಿ ಸಿಎಸ್‌ಇ ಮತ್ತು ಇಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆ (ಇಎಸ್‌ಇ) ಮೂಲಕ ನೇಮಕಾತಿ ಪ್ರಸ್ತಾವಕ್ಕೆ ತಾತ್ವಿಕ ಅನುಮೋದನೆಯನ್ನು ನೀಡಿದೆ. ರೈಲ್ವೆಯು ಗುರುವಾರವಷ್ಟೇ ಈ ಪ್ರಸ್ತಾವವನ್ನು ಸಲ್ಲಿಸಿತ್ತು.

ಐಆರ್‌ಎಂಎಸ್ ಅಡಿ ಒಂದೇ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು ಮತ್ತು ತಾಂತ್ರಿಕ ಹಾಗೂ ತಾಂತ್ರಿಕೇತರ ಹಿನ್ನೆಲೆಗಳ ಎಲ್ಲ ಅರ್ಜಿದಾರರಿಗೆ ಅರ್ಹತಾ ಮಾನದಂಡಗಳು ಒಂದೇ ಆಗಿದ್ದವು.

ಹೊಸದಾಗಿ ನೇಮಕಗೊಳ್ಳುವವರನ್ನು ಐಆರ್‌ಎಂಎಸ್(ಸಿವಿಲ್), ಐಆರ್‌ಎಂಎಸ್(ಮೆಕ್ಯಾನಿಕಲ್),ಐಆರ್‌ಎಂಎಸ್ (ಇಲೆಕ್ಟ್ರಿಕಲ್),ಐಆರ್‌ಎಂಸ್(ಎಸ್ ಆ್ಯಂಡ್ ಟಿ) ಮತ್ತು ಐಆರ್‌ಎಂಎಸ್(ಸ್ಟೋರ್ಸ್) ಎಂದು ಕರೆಯಲಾಗುವುದು. ಹಿಂದೆ ಈ ಸೇವೆಗಳ ಪೂರ್ವಪ್ರತ್ಯಯವು ಭಾರತೀಯ ರೇಲ್ವೆ ಆಗಿತ್ತು.

ಹೊಸ ಕ್ರಮವು ಹಳೆಯ ದಿನಗಳಿಗೆ ಮರಳುವುದಲ್ಲದೆ ಬೇರೇನೂ ಅಲ್ಲ. ಐಆರ್‌ಎಂಎಸ್ ಮಾನವ ಶಕ್ತಿಯ ಕ್ರಿಯಾತ್ಮಕ ಅಗತ್ಯವನ್ನು ಪರಿಗಣಿಸಿ ಕಾರ್ಯ ನಿರ್ವಹಿಸುತ್ತಿಲ್ಲ. ಇತಿಹಾಸ ಶಿಕ್ಷಣದ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗೆ ಹಳಿಗಳನ್ನು ಹಾಕುವ ಕೆಲಸವನ್ನು ನೀಡಬಹುದೇ? ಹೆಚ್ಚಿನ ತಾಂತ್ರಿಕತೆಯನ್ನು ಹೊಂದಿರುವ ಸಂಸ್ಥೆಯು ಸಾಮಾನ್ಯರೊಂದಿಗೆ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎನ್ನುವುದನ್ನು ಸರಕಾರವು ಅರಿತುಕೊಂಡಿದೆ. ಇದು ರೈಲ್ವೆಗೆ ಒಳ್ಳೆಯದು ಎಂದು ಹಿರಿಯ ಅಧಿಕಾರಿಯೋರ್ವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News