ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಪಿಐಎಲ್
ಹೊಸದಿಲ್ಲಿ: 2 ತಿಂಗಳೊಳಗೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ನಲ್ಲಿ ಸಾವರ್ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದು ಎಂದು ಸಾಲಿಸಿಟರ್ ಜನರಲ್ ನೀಡಿದ ಭರವಸೆಯ ಹೊರತಾಗಿಯೂ, ಆರ್ಟಿಕಲ್ 370 ಪ್ರಕರಣದ ತೀರ್ಪಿನ ನಂತರ ಕಳೆದ ಹನ್ನೊಂದು ತಿಂಗಳುಗಳಲ್ಲಿ ಕೇಂದ್ರ ಸರಕಾರವು ಆ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸದಿರುವುದು ಒಕ್ಕೂಟ ವ್ಯವಸ್ಥೆಯ ಮೂಲಭೂತ ಲಕ್ಷಣವನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಯಾವುದೇ ಅಡ್ಡಿ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ.