IAF ವೈಮಾನಿಕ ಪ್ರದರ್ಶನದ ವೇಳೆ ಐವರು ಸಾವು: ಪ್ರತಿಪಕ್ಷಗಳಿಂದ ತಮಿಳುನಾಡು ಸರಕಾರಕ್ಕೆ ತರಾಟೆ

Update: 2024-10-07 09:56 GMT

PC : PTI 

ತಮಿಳುನಾಡು: ಚೆನ್ನೈನ ಮರೀನಾ ಬೀಚ್ ನಲ್ಲಿ ಭಾರತೀಯ ವಾಯುಪಡೆಯ(IAF) ವೈಮಾನಿಕ ಪ್ರದರ್ಶನದ ವೇಳೆ ಐವರು ಪ್ರೇಕ್ಷಕರು ಸಾವನ್ನಪ್ಪಿದ ಮತ್ತು 200ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾದ ಘಟನೆ ಬಗ್ಗೆ ಪ್ರತಿಪಕ್ಷಗಳು ತಮಿಳುನಾಡು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಐಎಎಫ್ನ 92ನೇ ವಾರ್ಷಿಕೋತ್ಸವದ ಅಂಗವಾಗಿ ಮರೀನಾ ಬೀಚ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ಈ ವೇಳೆ ಕಿಕ್ಕಿರಿದ ಜನಸಂದಣಿ, ಬಿಸಿಲಿನ ತಾಪ, ಕಾಲ್ತುಳಿತ, ನಿರ್ಜಲೀಕರಣ ಸೇರಿ ಅಸ್ವಸ್ಥತೆಯಿಂದ ಐವರು ಮೃತಪಟ್ಟು, 200ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದರು.

ಘಟನೆ ಬಗ್ಗೆ ಎಕ್ಸ್ನಲ್ಲಿನ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿದ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ, ಅಸಮರ್ಪಕ ನಿರ್ವಹಣೆ ಬಗ್ಗೆ ಎಂಕೆ ಸ್ಟಾಲಿನ್ ನೇತೃತ್ವದ ಸರಕಾರವನ್ನು ಟೀಕಿಸಿದ್ದಾರೆ. ಮರೀನಾ ಬೀಚ್ ನಲ್ಲಿ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಜನಸಂದಣಿಯನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ. ಸ್ಥಳದಲ್ಲಿ ಸರಿಯಾಗಿ ಪೊಲೀಸರನ್ನು ಕೂಡ ನಿಯೋಜಿಸಲಾಗಿಲ್ಲ. ಸಂಚಾರ ದಟ್ಟಣೆ, ಕುಡಿಯುವ ನೀರಿನ ಅಭಾವ, ಬಿಸಿಲಿನ ತಾಪಕ್ಕೆ ತುತ್ತಾಗಿ ಹಲವರು ಆಸ್ಪತ್ರೆಗೆ ದಾಖಲಾಗಿರುವುದು ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಇದು ಸರಕಾರದ ನಿರ್ಲಕ್ಷ್ಯದಿಂದ ಸಂಭವಿಸಿದೆ. ಸರಿಯಾದ ಸೌಲಭ್ಯಗಳ ವ್ಯವಸ್ಥೆ ಮಾಡಿದ್ದರೆ ಸಾವು ಮತ್ತು ಅಸ್ವಸ್ಥತೆಯನ್ನು ತಡೆಯಬಹುದಿತ್ತು, ಇದು ಸರಕಾರದ ಸಂಪೂರ್ಣ ವೈಫಲ್ಯದಿಂದ ಸಂಭವಿಸಿದೆ ಎಂದು ಹೇಳಿದ್ದಾರೆ.

ಐಎಎಫ್ ವೈಮಾನಿಕ ಪ್ರದರ್ಶನದ ವೇಳೆ ಐವರು ಸಾವನ್ನಪ್ಪಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೇಳಿ ನನಗೆ ಆಘಾತವಾಯಿತು. ಡಿಎಂಕೆ ಸರ್ಕಾರ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದಿರುವುದು ಘಟನೆ ಸಂಭವಿಸಲು ಮುಖ್ಯ ಕಾರಣವಾಗಿದೆ. ಸರಕಾರ ಮೂಲ ಸೌಕರ್ಯಗಳು ಮತ್ತು ಸಾರಿಗೆ ವ್ಯವಸ್ಥೆಗಳನ್ನು ಒದಗಿಸಿಲ್ಲ ಎಂದು ಅಣ್ಣಾಮಲೈ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷವಾದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ʼಆಕಾಶದಲ್ಲಿ ಚಮತ್ಕಾರ, ನೆಲದ ಮೇಲೆ ದುರಂತʼ ಎಂದು ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ಸಂಸದೆ ಕನಿಮೊಳಿ, ಘಟನೆಯಲ್ಲಿ ಐವರು ಸಾವನ್ನಪ್ಪಿರುವುದು ನೋವುಂಟುಮಾಡಿದೆ. ನಿರ್ವಹಣೆಗೆ ಸಾಧ್ಯವಾಗದ ಸಭೆಗಳನ್ನು ಸಾಧ್ಯವಾದಷ್ಟು ಆಯೋಜಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News