ಅಸ್ಸಾಂ ಪೊಲೀಸರಿಂದ ನಕಲಿ ಎನ್‌ಕೌಂಟರ್‌ ಆರೋಪ: ಪೋಸ್ಟ್‌ ಮಾರ್ಟಂ ವರದಿ ದೊರೆಯುವವರೆಗೆ ಮೃತದೇಹಗಳನ್ನು ಶವಾಗಾರದಲ್ಲಿರಿಸಲು ಹೈಕೋರ್ಟ್‌ ಸೂಚನೆ

Update: 2024-07-27 07:51 GMT

ಗುವಾಹಟಿ ಹೈಕೋರ್ಟ್‌ (Photo:X/gauhatibench)

ಗುವಾಹಟಿ: ಮೂವರು ಹಮಾರ್‌ ವ್ಯಕ್ತಿಗಳನ್ನು ನಕಲಿ ಎನ್‌ಕೌಂಟರ್‌ನಲ್ಲಿ ಅಸ್ಸಾಂ ಪೊಲೀಸರು ಹತ್ಯೆಗೈದಿದ್ದಾರೆಂದು ಅವರ ಕುಟುಂಬಗಳು ಆರೋಪಿಸಿರುವ ಹಿನ್ನೆಲೆಯಲ್ಲಿ, ಅಂತಿಮ ಪೋಸ್ಟ್‌ ಮಾರ್ಟಂ ವರದಿ ಸಲ್ಲಿಕೆಯಾಗುವ ತನಕ ಅವರ ಮೃತದೇಹಗಳನ್ನು ಶವಾಗಾರದಲ್ಲಿರಿಸುವಂತೆ ಗುವಾಹಟಿ ಹೈಕೋರ್ಟ್‌ ಆದೇಶಿಸಿದೆ.

ಕಚಾರ್‌ ಪೊಲೀಸರ ಕಸ್ಟಡಿಯಲ್ಲಿರುವಾಗ ಜುಲೈ 17ರಂದು ಮಣಿಪುರದ ಫೆರ್‌ಝ್ವಾಲ್‌ ಜಿಲ್ಲೆಯ ಸೆನ್ವೊನ್‌ ಗ್ರಾಮದ ಜೊಶುವಾ, ಅಸ್ಸಾಂನ ಕಚರ್‌ ಜಿಲ್ಲೆಯ ಕೆ ಬೆತೆಲ್‌ ಗ್ರಾಮದ ನಿವಾಸಿಗಳಾದ ಲಲ್ಲುಂಗವಿ ಹಮಾರ್‌ ಮತ್ತು ಲಾಲ್‌ಬೀಕ್ಕುಂಗ್‌ ಹಮಾರ್‌ ಅವರು ಮೃತಪಟ್ಟಿದ್ದರು.

ಈ ಮೂವರೂ ತೀವ್ರಗಾಮಿಗಳು ಎಂದಿರುವ ಅಸ್ಸಾಂ ಪೊಲೀಸರು, ಅವರು ಇತರ ತೀವ್ರಗಾಮಿಗಳ ವಿರುದ್ಧದ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿಯಲ್ಲಿ ಮೃತಪಟ್ಟರು ಎಂದು ಹೇಳಿದ್ದಾರೆ. ಆದರೆ ಸಾವಿನ ಕಾರಣ ಕುರಿತು ಸಂಶಯ ವ್ಯಕ್ತಪಡಿಸಿ ಮೂವರ ಕುಟುಂಬಗಳು ಹೈಕೋರ್ಟ್ ಕದ ತಟ್ಟಿ ಪೋಸ್ಟ್‌ ಮಾರ್ಟಂ ಅನ್ನು ಅಸ್ಸಾಂ ಹೊರಗಿನ ವೈದ್ಯರು ನಡೆಸಬೇಕೆಂದು ಕೋರಿದ್ದರು.

ಶುಕ್ರವಾರ ಅಸ್ಸಾಂ ಅಡ್ವಕೇಟ್‌ ಜನರಲ್‌ ದೇವಜಿತ್‌ ಸೈಕಿಯಾ ಅವರು ಸಿಲ್ಚಾರ್‌ ಮೆಡಿಕಲ್‌ ಕಾಲೇಜ್‌ ಎಂಡ್‌ ಹಾಸ್ಪಿಟಲ್‌ ನೀಡಿದ್ದ ಪೋಸ್ಟ್‌ ಮಾರ್ಟಂ ವರದಿಯನ್ನು ಹೈಕೋರ್ಟ್‌ ಪೀಠಕ್ಕೆ ಸೀಲ್‌ ಮಾಡಿದ ಕವರ್‌ನಲ್ಲಿ ಹಸ್ತಾಂತರಿಸಿದರು.

ಆದರೆ ಇದರಲ್ಲಿ ಸಾವಿನ ಕಾರಣ ಕುರಿತ ಅಂತಿಮ ಅಭಿಪ್ರಾಯವಿಲ್ಲ , ವಿಧಿವಿಜ್ಞಾನ ನಿರ್ದೇಶನಾಲಯದಿಂದ ವರದಿ ಇನ್ನಷ್ಟೇ ಬರಬೇಕಿದೆ ಎಂದು ಹೈಕೋರ್ಟ್‌ ಹೇಳಿದೆ.

ಮುಂದಿನ ವಿಚಾರಣೆ ಆಗಸ್ಟ್‌ 2ರಂದು ನಡೆಯುವ ಮೊದಲು ರಾಜ್ಯ ಸರ್ಕಾರ ಅಂತಿಮ ಪೋಸ್ಟ್‌ ಮಾರ್ಟಂ ವರದಿಯೊಂದಿಗೆ ತನ್ನ ಅಫಿಡವಿಟ್‌ ಸಲ್ಲಿಸಬೇಕೆಂದು ಸೂಚಿಸಿದೆ.

ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಹಾಗೂ ಪೋಸ್ಟ್‌ ಮಾರ್ಟಂ ಅನ್ನು ನೆರೆಯ ಮಿಜೋರಾಂ ವೈದ್ಯರು ನಡೆಸಿದರೆ ಉತ್ತಮ ಎಂಬ ಅಭಿಪ್ರಾಯವನ್ನು ಅರ್ಜಿದಾರರ ಪರ ವಕೀಲ ಕಾಲಿನ್‌ ಗೊನ್ಸಾಲ್ವಿಸ್‌ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಸರ್ಕಾರದ ವಕೀಲರು ಆಕ್ಷೇಪಿಸಿದರು.

ಈ ಘಟನೆ ನಡೆದ ಕಚಾರ್‌ ಗ್ರಾಮವು ಮಣಿಪುರದ ಜಿರಿಬಮ್‌ ಜಿಲ್ಲೆಯ ಗಡಿ ಭಾಗದಲ್ಲಿದೆ. ಮೃತ ಮೂವರು ಸೇರಿದ ಹಮಾರ್‌ ಸಮುದಾಯವು ಕುಕಿ-ಝೋ ಪಂಗಡದ ಭಾಗವಾಗಿದೆ.

ಅಂತಿಮ ಪೋಸ್ಟ್‌ ಮಾರ್ಟಂ ವರದಿಗಾಗಿ ಕಾಯಲಾಗುವುದು ಹಾಗೂ ನಂತರ ಶವಗಳನ್ನು ಶವಾಗಾರದಿಂದ ಹೊರತೆಗೆಯಲಾಗುವುದು ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರು ಸಲ್ಲಿಸಿದ ವೀಡಿಯೋಗಳಲ್ಲಿ ಕೈಗಳನ್ನು ಕಟ್ಟಿ ಹಾಕಲಾಗಿದ್ದ ಮೂವರನ್ನು ಆಟೋರಿಕ್ಷಾವೊಂದರಲ್ಲಿ ಕಾಡಿನ ಪ್ರದೇಶಕ್ಕೆ ಕರೆದೊಯ್ಯುವುದು ಕಾಣಿಸುತ್ತದೆ. ನಂತರ ಮೂವರ ಮೃತದೇಹ ಪತ್ತೆಯಾಗಿದೆ. ಅಲ್ಲಿ ಕೆಲ ಬಂದೂಕಿನಿಂದ ಉಂಟಾದ ತೂತುಗಳು ಕಾಣಿಸಿವೆ. ಆದರೆ ಇಲ್ಲಿ ಗುಂಡಿನ ಚಕಮಕಿ ನಡೆದಿದೆಯೆಂಬುದು ಸಾಬೀತು ಪಡಿಸುವುದು ಕಷ್ಟ,” ಎಂದು ಅರ್ಜಿದಾರರ ವಕೀಲರು ಹೇಳಿದರಲ್ಲದೆ ವೀಡಿಯೋದಲ್ಲಿ ಮುಖ ಗುರುತಿಸಬಹುದಾದ ನಾಲ್ಕು ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News