ಹಿಮಾಚಲ ಪ್ರದೇಶದ ನಂತರ ಅಸ್ಸಾಂ ಸರದಿ |ಕಾಂಗ್ರೆಸ್ ತೊರೆದ ಕಾರ್ಯಾಧ್ಯಕ್ಷ ; ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ
ಗುವಾಹಟಿ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಹಾಗೂ ಮಾಜಿ ಸಂಸದ ಮಿಲಿಂದ್ ದಿಯೊರಾರಂಥ ನಾಯಕರು ಪಕ್ಷದಿಂದ ನಿರ್ಗಮಿಸಿದ ನಂತರ, ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಅಸ್ಸಾಂನ ಕಾರ್ಯಾಧ್ಯಕ್ಷ ಕೂಡಾ ಪಕ್ಷ ತೊರೆದಿದ್ದು, ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಬುಧವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರಿಗೆ ಬರೆದಿರುವ ಪತ್ರದಲ್ಲಿ ಜೋರ್ಹತ್ ನ ಮಾಜಿ ಶಾಸಕರೂ ಆದ ರಾಣಾ ಗೋಸ್ವಾಮಿ ತನ್ನ ರಾಜಿನಾಮೆಯನ್ನು ಪ್ರಕಟಿಸಿದ್ದಾರೆ. “ನಾನು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹುದ್ದೆ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ” ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಗೋಸ್ವಾಮಿ ಸದ್ಯ ಹೊಸ ದಿಲ್ಲಿಗೆ ತೆರಳಿದ್ದು, ಅಲ್ಲಿ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಬಿಜೆಪಿಯ ಉನ್ನತ ಮಟ್ಟದ ಸಮಿತಿಯು ರಾಷ್ಟ್ರ ರಾಜಧಾನಿಯಲ್ಲಿ ಸಭೆ ನಡೆಸಲಿದ್ದು, ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ತನ್ನ ಪಕ್ಷದ ಅಭ್ಯರ್ಥಿಗಳು ಹಾಗೂ ತಮ್ಮ ಮೈತ್ರಿ ಪಕ್ಷಗಳಿಗೆ ಎಷ್ಟು ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಕುರಿತು ನಿರ್ಧರಿಸಲಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಹಾದು ಹೋದಾಗ ಗೋಸ್ವಾಮಿ ಆ ಯಾತ್ರೆಯ ಮುಂಚೂಣಿಯಲ್ಲಿದ್ದರು. ಕೆಲ ದಿನಗಳ ಹಿಂದೆ ಯಾತ್ರೆಯ ಮಾರ್ಗವನ್ನು ಬದಲಿಸಿದ ಕಾರಣಕ್ಕೆ ಪೊಲೀಸರಿಂದ ಪ್ರಶ್ನೆಗೊಳಗಾಗಿದ್ದರು ಹಾಗೂ ಅವರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಆದರೆ, ರವಿವಾರ ಹಲವಾರು ರಾಜಕೀಯ ಕಾರಣಗಳನ್ನು ಮುಂದು ಮಾಡಿ ಅವರು ಮೇಲ್ಭಾಗದ ಅಸ್ಸಾಂನ ಸಂಘಟನಾ ಉಸ್ತುವಾರಿ ಹುದ್ದೆಯನ್ನು ತೊರೆದಿದ್ದರು.
ಈ ತಿಂಗಳ ಆರಂಭದಲ್ಲಿ, ಮತ್ತೊಬ್ಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಮಲಾಖ್ಯ ಡೇ ಪುರ್ಕಾಯಸ್ಥ ಕೂಡಾ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, ರಾಜ್ಯದಲ್ಲಿನ ಬಿಜೆಪಿ ಸರಕಾರಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಅವರೊಂದಿಗೆ ಮತ್ತೊಬ್ಬ ಕಾಂಗ್ರೆಸ್ ಶಾಸಕ ಬಸಂತ್ ದಾಸ್ ಕೂಡಾ ಕೈ ಜೋಡಿಸಿದ್ದರು. ಅವರಿಬ್ಬರನ್ನು ಹೊರತುಪಡಿಸಿದರೆ, 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ 26 ಸದಸ್ಯರ ಬಲವನ್ನು ಮಾತ್ರ ಹೊಂದಿದೆ.
ಲೋಕಸಭಾ ಚುನಾವಣೆಗೂ ಮುನ್ನ ಗೋಸ್ವಾಮಿ ಪಕ್ಷವನ್ನು ತೊರೆದಿರುವುದರಿಂದ ಕಾಂಗ್ರೆಸ್ ಪಕ್ಷದ ಸಮಸ್ಯೆಯು ಮತ್ತಷ್ಟು ಬಿಗಡಾಯಿಸಿದೆ. ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆಘಾತಕಾರಿ ಸೋಲು ಅನುಭವಿಸಿರುವ ಕಾಂಗ್ರೆಸ್, ಇದೀಗ ಉತ್ತರ ಭಾರತದಲ್ಲಿ ಅಧಿಕಾರ ಹೊಂದಿರುವ ಏಕೈಕ ರಾಜ್ಯವಾದ ಹಿಮಾಚಲ ಪ್ರದೇಶದಲ್ಲೂ ಸರಕಾರ ಕಳೆದುಕೊಳ್ಳುವ ಅಪಾಯದಲ್ಲಿದೆ.
ಅಸ್ಸಾಂ ರಾಜ್ಯದಿಂದ 14 ಸಂಸದರು ಆಯ್ಕೆಯಾಗಲಿದ್ದು, 2019ರ ಚುನಾವಣೆಯಲ್ಲಿ ಬಿಜೆಪಿಯು 9 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.