ವಿಧಾನಸಭಾ ಫಲಿತಾಂಶ: ಹರ್ಯಾಣದಲ್ಲಿ ಕಾಂಗ್ರೆಸ್ ಗೆ ಮುಳುವಾಗಿದ್ದೇನು?

Update: 2024-10-08 10:45 GMT

PC : PTI 

ಹರ್ಯಾಣ: ಜಾಟ್ ಸಮುದಾಯದ ಓಲೈಕೆ, ಹರ್ಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಮೇಲಿನ ಅತಿಯಾದ ಅವಲಂಬನೆ ಮತ್ತು ದಲಿತ ನಾಯಕಿ ಕುಮಾರಿ ಸೆಲ್ಜಾ ಅವರೊಂದಿಗಿನ ಜಟಾಪಟಿ, ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕಾಂಗ್ರೆಸ್ ನ ಕನಸಿಗೆ ತಣ್ಣೀರೆರಚಿದೆ.

ಹರ್ಯಾಣದಲ್ಲಿ ಜಾಟ್ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಮೂಲಕ ಜಾಟ್ ಸಮುದಾಯನ್ನು ಕಾಂಗ್ರೆಸ್ ಓಲೈಕೆ ಮಾಡಿದ್ದರಿಂದ ಕಾಂಗ್ರೆಸ್ ಕಡೆ ಒಲವು ತೋರಲು ಮುಂದಾಗಿದ್ದ ದಲಿತರು ಮತ್ತು ಜಾಟ್ ಹೊರತು ಪಡಿಸಿದ ಇತರ ಸಮುದಾಯದ ಜನರು ಕಾಂಗ್ರೆಸ್ ನಿಂದ ದೂರವಾದಂತೆ ತೋರುತ್ತಿದೆ.

ಜಾಟ್ ಅಲ್ಲದ ಸಮುದಾಯಗಳನ್ನು ಬಿಜೆಪಿ ಹೆಚ್ಚಾಗಿ ಓಲೈಕೆ ಮಾಡುವಲ್ಲಿ ಯಶಸ್ವಿಯಾದಂತೆ ತೋರುತ್ತಿದೆ. ಈ ಬಾರಿ ಬಿಜೆಪಿ ತಮ್ಮ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬಿಸಿ ಮತ್ತು ಬ್ರಾಹ್ಮಣ ಅಭ್ಯರ್ಥಿಗಳಿಗೆ ಹೆಚ್ಚು ಮಣೆ ಹಾಕಿತ್ತು. ಇನ್ನೊಂದು ಕಡೆ ಕಾಂಗ್ರೆಸ್ ಜಾಟ್ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದ ಪಕ್ಷದೊಳಗೆ ಅಂದರೆ ಕಾಂಗ್ರೆಸ್ ನ ಹಿರಿಯ ನಾಯಕಿ ಮತ್ತು ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ ಮತ್ತು ರಣದೀಪ್ ಸುರ್ಜೆವಾಲಾ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಕಾಂಗ್ರೆಸ್ ಹೈಕಮಾಂಡ್ ಕೂಡ ಹೂಡಾಗೆ ಹೆಚ್ಚು ಮಣೆ ಹಾಕಿದಂತೆ ಕಂಡು ಬಂದಿದೆ. ಕಾಂಗ್ರೆಸ್ ನಿಂದ ಕಣಕ್ಕಿಳಿದಿರುವ ಕನಿಷ್ಠ 70 ಅಭ್ಯರ್ಥಿಗಳು ಹೂಡಾ ಪಾಳಯದ ಬೆಂಬಲಿಗರಾಗಿದ್ದಾರೆ. ಕುಮಾರಿ ಸೆಲ್ಜಾ ಅವರ ಪಾಳಯಕ್ಕೆ ಕೇವಲ 9 ಟಿಕೆಟ್ ಗಳನ್ನಷ್ಠೇ ನೀಡಲಾಗಿದೆ.

ದಲಿತ ಸಮುದಾಯದ ಪ್ರಭಾವಿ ನಾಯಕಿಯಾಗಿದ್ದ ಸೆಲ್ಜಾ ಅವರು ಪ್ರಚಾರದಿಂದ ದೂರ ಉಳಿದಿದ್ದರು. ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲೂ ಭಾಗಿಯಾಗಿರಲಿಲ್ಲ. ಅವರು ಕಾಂಗ್ರೆಸ್ ನಾಯಕತ್ವದ ಜೊತೆ ಮುಣಿಸಿಕೊಂಡಿದ್ದರು.

ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಸೆಲ್ಜಾ ಅವರನ್ನು ಕಾಂಗ್ರೆಸ್ ತೊರೆದು ಕೇಸರಿ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದು, ಕಾಂಗ್ರೆಸ್ ನಲ್ಲಿ ಉದ್ಭವಿಸಿದ್ದ ಅಸಮಾಧಾನದ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದ್ದರು.

ಈ ವರ್ಷದ ಆರಂಭದಿಂದಲೇ ಕಾಂಗ್ರೆಸ್ ಪಾಳಯದಲ್ಲಿ ಒಡಕು ಕಾಣಿಸಿಕೊಂಡಿದೆ. ಭೂಪಿಂದರ್ ಸಿಂಗ್ ಹೂಡಾ ಅವರು ಮತದಾರರನ್ನು ಸೆಳೆಯಲು 'ಘರ್ ಘರ್ ಕಾಂಗ್ರೆಸ್' ಅಭಿಯಾನವನ್ನು ಮುನ್ನಡೆಸಿದರೆ, ಹೂಡಾ ವಿರೋಧಿ ಪಾಳಯವೆಂದು ಗುರುತಿಸಲ್ಪಟ್ಟ ರಣದೀಪ್ ಸುರ್ಜೆವಾಲಾ, ಕುಮಾರಿ ಸೆಲ್ಜಾ ಮತ್ತು ಕಿರಣ್ ಚೌಧರಿ 'ಕಾಂಗ್ರೆಸ್ ಸಂದೇಶ್ ಯಾತ್ರೆ' ಅಭಿಯಾನವನ್ನು ಮುನ್ನಡೆಸಿದ್ದರು.

ಹರಿಯಾಣದ ಜನಸಂಖ್ಯೆಯಲ್ಲಿ ಜಾಟ್ಗಳು 26-28 ಪ್ರತಿಶತದಷ್ಟಿದ್ದರೆ, ರಾಜ್ಯದಲ್ಲಿ 17 ಎಸ್ಸಿ ಮೀಸಲಾತಿ ಸ್ಥಾನಗಳಿದೆ. ಇದರರ್ಥ ಹೆಚ್ಚು ಎಸ್ಸಿ ಸ್ಥಾನಗಳನ್ನು ಗೆಲ್ಲುವ ಪಕ್ಷವು ಬಹುಮತ ದಾಟುವ ಉತ್ತಮ ಅವಕಾಶಗಳನ್ನು ಹೊಂದಿರುತ್ತದೆ.

ಹರ್ಯಾಣದಲ್ಲಿ ಜಾಟ್ ಸಮುದಾಯದ ಮೇಲೆ ಕಾಂಗ್ರೆಸ್ ನ ಅತಿಯಾದ ಅವಲಂಬನೆ ಮತ್ತು ದಕ್ಷಿಣ ಹರ್ಯಾಣದ ಅಹಿರ್ವಾಲ್ ಪ್ರದೇಶವನ್ನು ಕಾಂಗ್ರೆಸ್ ನಿರ್ಲಕ್ಷಿಸಿರುವುದು ಕಾಂಗ್ರೆಸ್ ಗೆ ದೊಡ್ಡ ಹೊಡೆತ ನೀಡಿದೆ.

ದಕ್ಷಿಣ ಹರ್ಯಾಣದ ಅಹಿರ್ವಾಲ್ ಪ್ರದೇಶವು ಗುರ್ಗಾಂವ್, ರೇವಾರಿ, ಫರಿದಾಬಾದ್ ಮತ್ತು ಭಿವಾನಿ-ಮಹೇಂದರ್ಗಢ್ ಲೋಕಸಭಾ ಸ್ಥಾನಗಳನ್ನು ಒಳಗೊಂಡಿದೆ. ಈ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 28 ವಿಧಾನಸಭಾ ಸ್ಥಾನಗಳಿವೆ.

2014ರಲ್ಲಿ ಅಹಿರ್ವಾಲ್ ನಲ್ಲಿ ಬಿಜೆಪಿ 15 ಸ್ಥಾನ ಗಳಿಸಿತ್ತು. 2019ರ ಚುನಾವಣೆಯಲ್ಲಿ ಹರ್ಯಾಣದಲ್ಲಿ ಬಿಜೆಪಿ ಒಟ್ಟು 47 ಕ್ಷೇತ್ರಗಳಿಂದ 40ಕ್ಕೆ ಇಳಿದಾಗಲೂ ಅಹಿರ್ವಾಲ್ ಪ್ರದೇಶದಲ್ಲಿ 16 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿಯು ಈ ಪ್ರದೇಶಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ಇದಲ್ಲದೆ ಮತದಾನಕ್ಕೆ ಮೊದಲು ದಲಿತ ಮತಗಳ ವಿಭಜನೆ ಒಂದು ಕಡೆಯಾದರೆ, ಇನ್ನೊಂದೆಡೆ ಬಿಜೆಪಿಯು ಜಾಟ್ ಅಲ್ಲದ ಮತದಾರರನ್ನು ಒಟ್ಟುಗೂಡಿಸುವಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಯಶಸ್ವಿಯಾಗಿದೆ.

ಕೃಪೆ: indiatoday.in

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News