ಎಸ್‌ಸಿ /ಎಸ್‌ಟಿ ಸಮುದಾಯಗಳಿಗೆ ಸೇರಿದ ಪೊಕ್ಸೊ ಸಂತ್ರಸ್ತರಿಗೆ ತಕ್ಷಣ ಪರಿಹಾರ ಪಾವತಿಗೆ ರಾಜ್ಯಗಳಿಗೆ ಎನ್‌ಸಿಪಿಸಿಆರ್ ಆಗ್ರಹ
ಹೊಸದಿಲ್ಲಿ : ಪರಿಶಿಷ್ಟ ಜಾತಿ(ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್‌ಟಿ) ಸಮುದಾಯಗಳಿಗೆ ಸೇರಿದ ಪೊಕ್ಸೊ ಸಂತ್ರಸ್ತರ ಸೂಕ್ತ ಪುನರ್ವಸತಿಗಾಗಿ ಅವರಿಗೆ ತಕ್ಷಣ ಪರಿಹಾರದ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್)ವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಆಗ್ರಹಿಸಿದೆ.
ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿರುವ ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ ಕಾನುಂಗೋ ಅವರು,ಆಯೋಗಕ್ಕೆ 10 ದಿನಗಳಲ್ಲಿ ಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
2012ರ ಪೊಕ್ಸೊ ಕಾಯ್ದೆಯಡಿ ರಕ್ಷಿಸಲ್ಪಟ್ಟ ಎಸ್‌ಸಿ/ಎಸ್‌ಟಿ ಮಕ್ಕಳಿಗೆ ಪರಿಹಾರ ಪಾವತಿ ಕುರಿತು ಸ್ಪಷ್ಟತೆಯ ಕೊರತೆಯ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿರುವ ಕಾನುಂಗೋ ಆಂಧ್ರಪ್ರದೇಶ, ಕರ್ನಾಟಕ, ಪಂಜಾಬ್, ತಮಿಳುನಾಡು ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳನ್ನು ವಿಶೇಷವಾಗಿ ಬೆಟ್ಟು ಮಾಡಿದ್ದಾರೆ.
ಆಯೋಗದ ಪೊಕ್ಸೊ ಟ್ರ್ಯಾಕಿಂಗ್ ಪೋರ್ಟಲ್‌ನಲ್ಲಿ 5,178 ಪೊಕ್ಸೊ ಸಂತ್ರಸ್ತರು ನೋಂದಾಯಿಸಲ್ಪಟ್ಟಿದ್ದು, ಈ ಪೈಕಿ 1,546 (ಸುಮಾರು ಶೇ.41) ಸಂತ್ರಸ್ತರು ಎಸ್‌ಟಿ/ಎಸ್‌ಸಿ ವರ್ಗಗಳಿಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿರುವ ಕಾನುಂಗೋ, ಈ ದತ್ತಾಂಶಗಳ ಲಭ್ಯತೆ ಮತ್ತು ಸ್ಪಷ್ಟ ಕಾನೂನು ಬಾಧ್ಯತೆಗಳ ಹೊರತಾಗಿಯೂ ಈ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಕೊರತೆಯಿದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಪೊಕ್ಸೊ ಸಂತ್ರಸ್ತರೆಂದು ಗುರುತಿಸಲಾಗಿರುವ ಶೇ.41.1ರಷ್ಟು ಮಕ್ಕಳು ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಸೇರಿದ್ದಾರೆ ಎಂದು ತಿಳಿಸಿರುವ ಅವರು,ಎಸ್/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆ,1989ರಡಿ ಈ ಎಸ್‌ಸಿ/ಎಸ್‌ಟಿ ಸಂತ್ರಸ್ತರಿಗೆ ಪರಿಹಾರವನ್ನು ಪಾವತಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಆಯೋಗವು ಸ್ವೀಕರಿಸಿಲ್ಲ ಎಂದಿದ್ದಾರೆ.
ಇದೇ ರೀತಿ ಎಸ್‌ಸಿ/ಎಸ್‌ಟಿ ಸಂತ್ರಸ್ತರ ಸಂಖ್ಯೆ ಕರ್ನಾಟಕದಲ್ಲಿ ಶೇ.45, ಪಂಜಾಬಿನಲ್ಲಿ ಶೇ.48.5, ತಮಿಳುನಾಡಿನಲ್ಲಿ ಶೇ.35.4 ಮತ್ತು ಉತ್ತರ ಪ್ರದೇಶದಲ್ಲಿ ಶೇ.13ರಷ್ಟಿದ್ದು, ಕಾನೂನಿನ ಸ್ಪಷ್ಟ ನಿಬಂಧನೆಗಳ ಹೊರತಾಗಿಯೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಈ ಸಂತ್ರಸ್ತರು ಯಾವುದೇ ಪರಿಹಾರವನ್ನು ಸ್ವೀಕರಿಸಿದ್ದಾರೆಯೇ ಎನ್ನುವುದು ಅಸ್ಪಷ್ಟವಾಗಿದೆ ಎಂದು ಕಾನುಂಗೋ ಪತ್ರದಲ್ಲಿ ತಿಳಿಸಿದ್ದಾರೆ.
ಪೊಕ್ಸೊ ಸಂತ್ರಸ್ತರ ಸುರಕ್ಷತೆ ಮತ್ತು ಭದ್ರತೆಯನ್ನು ಹಾಗೂ ಪೊಕ್ಸೊ ಕಾಯ್ದೆಯಡಿ ಅವರಿಗೆ ನ್ಯಾಯಯುತ ಪರಿಹಾರ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಎನ್‌ಸಿಪಿಸಿಆರ್ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳನ್ನು ಸಂಪರ್ಕಿಸಿದೆ ಎಂದು ಕಾನುಂಗೋ ತಿಳಿಸಿದ್ದಾರೆ.
ಮಕ್ಕಳಿಗೆ ಸಕಾಲಿಕ ಹಣಕಾಸು ನೆರವನ್ನು ಖಚಿತಪಡಿಸಿಕೊಳ್ಳಲು ಎಸ್‌ಸಿ ಮತ್ತು ಎಸ್‌ಟಿಗಳು ಸೇರಿದಂತೆ ಎಲ್ಲ ಸಂತ್ರಸ್ತರಿಗಾಗಿ ರಾಜ್ಯ-ನಿರ್ದಿಷ್ಟ ಪರಿಹಾರ ಯೋಜನೆಯನ್ನು ಅಸ್ತಿತ್ವಕ್ಕೆ ತರುವಂತೆಯೂ ಎನ್‌ಸಿಪಿಸಿಆರ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ವಿನಂತಿಸಿದೆ.