ಪೋಲಿಸ್ ಠಾಣೆಯೊಳಗೆ ಸಂಭಾಷಣೆಯ ಧ್ವನಿಮುದ್ರಣ ಅಧಿಕೃತ ರಹಸ್ಯಗಳ ಕಾಯ್ದೆಯಡಿ ಅಪರಾಧವಲ್ಲ:ಬಾಂಬೆ ಹೈಕೋರ್ಟ್

Update: 2024-10-08 11:09 GMT

ಬಾಂಬೆ ಹೈಕೋರ್ಟ್ | PC : PTI 

ಮುಂಬೈ: ಪೋಲಿಸ್ ಠಾಣೆಯೊಳಗೆ ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಳ್ಳುವುದು ಅಧಿಕೃತ ರಹಸ್ಯಗಳ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠವು ಇತ್ತೀಚಿಗೆ ತೀರ್ಪು ನೀಡಿದೆ.

ಹೀಗಾಗಿ ನ್ಯಾಯಾಲಯವು ಮಹಾರಾಷ್ಟ್ರದ ಪಥರ್ಡಿಯ ಇಬ್ಬರು ಸೋದರರ ವಿರುದ್ಧದ ಗೂಢಚಾರಿಕೆ ಆರೋಪಗಳನ್ನು ರದ್ದುಗೊಳಿಸಿದೆ,ಆದರೆ ಅವರ ವಿರುದ್ಧದ ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಕೈಬಿಡಲು ನಿರಾಕರಿಸಿದೆ.

ಅಧಿಕೃತ ರಹಸ್ಯಗಳ ಕಾಯ್ದೆ,1923ರಡಿ ಪೋಲಿಸರು ಪ್ರಕರಣವನ್ನು ದಾಖಲಿಸಿದ್ದರು.

ಕಾಯ್ದೆಯ ಕಲಂ 2(8) ‘ನಿಷೇಧಿತ ಸ್ಥಳ’ವನ್ನು ವ್ಯಾಖ್ಯಾನಿಸಿದೆ ಮತ್ತು ಪೋಲಿಸ್ ಠಾಣೆಯು ಈ ವ್ಯಾಖ್ಯೆಯಲ್ಲಿ ಸೇರಿಲ್ಲ. ಇದೇ ಕಾಯ್ದೆಯ ಕಲಂ 3 ಗೂಢಚಾರಿಕೆಗಾಗಿ ದಂಡನೆಯನ್ನು ಒಳಗೊಂಡಿದೆಯಾದರೂ ಪೋಲಿಸ್ ಠಾಣೆಯಲ್ಲಿ ಮಾಡುವ ಎಲ್ಲವನ್ನೂ ಸಂಪೂರ್ಣವಾಗಿ ಈ ಕಲಮ್‌ನಲ್ಲಿ ಸೇರಿಸಲಾಗಿಲ್ಲ. ಹೀಗಿರುವಾಗ ಈ ಕಲಂ ಅನ್ವಯವಾಗುವುದೇ ಇಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಎಸ್.ಜಿ.ಚಾಪಗಾಂವ್ಕರ್ ಅವರ ಪೀಠವು,ಅಧಿಕೃತ ರಹಸ್ಯಗಳ ಕಾಯ್ದೆಯಡಿ ಆರೋಪಗಳು ಆಧಾರರಹಿತವಾಗಿವೆ ಎಂದು ಸ್ಪಷ್ಟಪಡಿಸಿತು.

2022,ಎ.21ರಂದು ಸೋದರರಾದ ಸುಭಾಷ ಅಠಾರೆ ಮತ್ತು ಸಂತೋಷ ಅಠಾರೆ ಅವರ ಮನೆಗೆ ನುಗ್ಗಿದ್ದ ಮೂವರು ವ್ಯಕ್ತಿಗಳು ಅವರ ತಾಯಿಯ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ತಾವು ಸಲ್ಲಿಸಿದ್ದ ದೂರನ್ನು ಅಸಂಜ್ಞೇಯ ಅಪರಾಧ ಎಂದು ದಾಖಲಿಸಿಕೊಂಡಿದ್ದಕ್ಕಾಗಿ ಪೋಲಿಸರ ಬಗ್ಗೆ ಅಸಮಾಧಾನಗೊಂಡಿದ್ದ ಅಠಾರೆ ಸೋದರರು ಅವರಿಂದ ಉತ್ತರಗಳನ್ನು ಕೋರಿದ್ದರು. ಈ ವಿಷಯದಲ್ಲಿ ತನಿಖಾಧಿಕಾರಿಯೊಂದಿಗೆ ವಾಗ್ವಾದದ ಸಂದರ್ಭದಲ್ಲಿ ಸುಭಾಷ ಅಠಾರೆ ಸಂಭಾಷಣೆಯನ್ನು ಧ್ವನಿಮುದ್ರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೋಲಿಸರು ಕ್ರಿಮಿನಲ್ ಪಿತೂರಿ,ಬೆದರಿಕೆ ಮತ್ತು ಅಧಿಕೃತ ರಹಸ್ಯಗಳ ಕಾಯ್ದೆಯ ಉಲ್ಲಂಘನೆ ಆರೋಪದಲ್ಲಿ ಅಠಾರೆ ಸೋದರರ ವಿರುದ್ಧ 2022,ಜು.19ರಂದು ಪ್ರಕರಣವನ್ನು ದಾಖಲಿಸಿದ್ದರು.

ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ತಮ್ಮ ವಿರುದ್ಧ ಪ್ರಕರಣವನ್ನು ದಾಖಲಿಸುವುದಾಗಿ ಪೋಲಿಸರು ಬೆದರಿಕೆಯೊಡ್ಡಿದ್ದರು ಎಂದು ಅಠಾರೆ ಸೋದರರು ಆರೋಪಿಸಿದ್ದರು ಮತ್ತು ಧ್ವನಿಮುದ್ರಣದ ಪ್ರತಿಯನ್ನು ಪೋಲಿಸ್ ಮಹಾ ನಿರ್ದೇಶಕರಿಗೆ ಕಳುಹಿಸಿದ್ದರು. ಆ ಬಳಿಕ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಎಫ್‌ಐಆರ್ ಪ್ರತೀಕಾರದ ಕ್ರಮವಾಗಿದ್ದು,ಕಟ್ಟುಕಥೆಗಳಿಂದ ಕೂಡಿದೆ,ಹೀಗಾಗಿ ಅದನ್ನು ರದ್ದುಗೊಳಿಸಬೇಕು ಎಂದು ಅಠಾರೆ ಸೋದರರ ಪರ ವಕೀಲರು ವಾದಿಸಿದ್ದರು.

ಇದಕ್ಕೆ ವ್ಯತಿರಿಕ್ತವಾಗಿ ಪ್ರಾಸಿಕ್ಯೂಷನ್,ಸುಭಾಷ ಅಠಾರೆ ಸ್ವತಃ ಪೋಲಿಸ್ ಅಧಿಕಾರಿಯಾಗಿದ್ದು ಸಂಭಾಷಣೆಯ ಧ್ವನಿಮುದ್ರಣ ಪೋಲಿಸ್ ಸಿಬ್ಬಂದಿಗಳಿಗೆ ಬೆದರಿಕೆಯಂತಿದೆ ಮತ್ತು ಇದು ಸೋದರರ ವಿರುದ್ಧದ ಆರೋಪಗಳನ್ನು ಸಮರ್ಥಿಸಿದೆ ಎಂದು ವಾದಿಸಿತ್ತು.

ವಾದವಿವಾದಗಳನ್ನು ಆಲಿಸಿದ ಉಚ್ಚ ನ್ಯಾಯಾಲಯವು ಅಧಿಕೃತ ರಹಸ್ಯಗಳಡಿ ಆರೋಪಗಳನ್ನು ರದ್ದುಗೊಳಿಸಿತು,ಆದರೆ ಐಪಿಸಿಯಡಿ ಆರೋಪಗಳಿಗೆ ಹೆಚ್ಚಿನ ವಿಚಾರಣೆ ಅಗತ್ಯವಿದೆಯೇ ಎನ್ನುವುದನ್ನು ಪರಿಶೀಲಿಸಲು ಪ್ರಕರಣವನ್ನು ಕೆಳನ್ಯಾಯಾಲಯಕ್ಕೆ ವರ್ಗಾಯಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News