ಗ್ರಾಹಕರಿಂದ ಹೆಚ್ಚಿದ ದೂರು | OLA ಎಲೆಕ್ಟ್ರಿಕ್ ಗೆ ಗ್ರಾಹಕರ ಹಕ್ಕುಗಳ ಪ್ರಾಧಿಕಾರದಿಂದ ಶೋಕಾಸ್ ನೋಟಿಸ್
ಹೊಸದಿಲ್ಲಿ : ಗ್ರಾಹಕರ ಹಕ್ಕುಗಳ ಉಲ್ಲಂಘನೆ ಆರೋಪದಲ್ಲಿಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಸೋಮವಾರ OLA ಎಲೆಕ್ಟ್ರಿಕ್‌ಗೆ ಶೋಕಾಸ್ ನೋಟಿಸ್ ನೀಡಿದೆ.
ತಪ್ಪುದಾರಿಗೆಳೆಯುವ ಜಾಹೀರಾತುಗಳು, ಗ್ರಾಹಕರ ಹಕ್ಕುಗಳ ಉಲ್ಲಂಘನೆ ಆರೋಪಗಳ ಕುರಿತು ಪ್ರತಿಕ್ರಿಯಿಸಲು ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪೆನಿ OLAಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು 15 ದಿನಗಳ ಕಾಲಾವಕಾಶ ನೀಡಿದೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 1, 2023 ರಿಂದ ಆಗಸ್ಟ್ 30, 2024 ರ ನಡುವೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ OLA ಎಲೆಕ್ಟ್ರಿಕ್ ಸ್ಕೂಟರ್ ಸಂಬಂಧಿಸಿ ಗ್ರಾಹಕರಿಂದ 9,948 ದೂರುಗಳು ಬಂದಿದೆ ಎಂದು mint ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ OLA ಎಲೆಕ್ಟ್ರಿಕ್‌ನ ಮುಖ್ಯ ಹಣಕಾಸು ಅಧಿಕಾರಿ ಹರೀಶ್ ಅಬಿಚಂದಾನಿ ಅವರು ಕಂಪೆನಿಯು ನಿರ್ದಿಷ್ಟ ಸಮಯದೊಳಗೆ ಪ್ರಾಧಿಕಾರಕ್ಕೆ ಪೂರಕ ದಾಖಲೆಗಳೊಂದಿಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿಸಿದ್ದಾರೆ.
ಸೋಮವಾರದಂದು OLA ಎಲೆಕ್ಟ್ರಿಕ್ ಷೇರು ಬೆಲೆಗಳು 8% ಕ್ಕಿಂತ ಹೆಚ್ಚು ಕುಸಿದಿದ್ದವು. ಕಂಪೆನಿ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವಿಶ್ ಅಗರ್ವಾಲ್ ಅವರು ಸ್ಟಾಂಡಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧ ನಡೆಸಿದ ಬಳಿಕ ಈ ಬೆಳವಣಿಗೆ ನಡೆಯಿತು. ಇಬ್ಬರ ಜಗಳ ತಾರಕಕ್ಕೇರುತ್ತಿದ್ದಂತೆ ಸಾವಿರಾರು OLA ಎಲೆಕ್ಟ್ರಿಕ್ ಗ್ರಾಹಕರು ವಿಳಂಬವಾದ ಸೇವೆ ಮತ್ತು ಮಾರಾಟದ ನಂತರದ ಸಮಸ್ಯೆಗಳ ಬಗ್ಗೆ ತಮ್ಮ ಕಮೆಂಟ್ ಮಾಡಿ ಆಕ್ರೋಶ ಹೊರಹಾಕಿದ್ದರು.