ಮುಸ್ಲಿಮರು ಮತ ಹಾಕದಂತೆ ತಡೆಯಲು ಯತ್ನ ; ಉತ್ತರ ಪ್ರದೇಶ ಪೊಲೀಸರ ವಿರುದ್ಧ ಆರೋಪ
ಸಂಭಾಲ್ : ಸಾರ್ವತ್ರಿಕ ಚುನಾವಣೆಯ 7ನೇ ಹಂತದ ಮೂರನೇ ಸುತ್ತಿನಲ್ಲಿ ಮತದಾನ ಮಾಡುವುದರಿಂದ ತಮ್ಮನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ಉತ್ತರಪ್ರದೇಶ ಸಂಭಾಲ್ ಲೋಕಸಭಾ ಕ್ಷೇತ್ರದ ಮುಸ್ಲಿಂ ಮತದಾರರು ಆರೋಪಿಸಿದ್ದಾರೆ.
ಪೊಲೀಸರ ಕ್ರಮದಿಂದ ಮತದಾರರು ತೊಂದರೆಗೊಳಗಾದ ಸಂಭಾಲ್ ಲೋಕಸಭಾ ಕ್ಷೇತ್ರದ ಹಲವು ವೀಡಿಯೊಗಳು ವೈರಲ್ ಆಗಿವೆ. ತಮ್ಮ ಗುರುತು ಚೀಟಿ ಹಾಗೂ ಮತದಾನದ ಚೀಟಿಯನ್ನು ಪೊಲೀಸರು ಕಸಿದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪೊಲೀಸರ ಥಳಿತದಿಂದ ಕೆಲವು ಮತದಾರರು ಗಾಯಗೊಂಡಿರುವದನ್ನು ತೋರಿಸುವ ವೀಡಿಯೊವನ್ನು ಸಮಾಜವಾದಿ ಪಕ್ಷ (ಎಸ್ಪಿ) ‘ಎಕ್ಸ್’ನ ತನ್ನ ಅಧಿಕೃತ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ ಪರಿಣಾಮ ಕೆಲವು ವೃದ್ಧ ಮತದಾರರು ಪ್ರಜ್ಞೆ ಕಳೆದುಕೊಂಡು ಬೀಳುತ್ತಿರುವುದನ್ನು ಕೂಡ ವೀಡಿಯೊ ದಾಖಲಿಸಿದೆ.
ಸಂಭಾಲ್ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಕುಂದಾರ್ಕಿ, ಬಿಲಾರಿ, ಚಂಡೌಸಿ, ಸಂಭಾಲ್ ಹಾಗೂ ಅಸ್ಮೋಲಿ ಸೇರಿದಂತೆ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಪೊಲೀಸರು ಮತದಾರರಿಗೆ ಥಳಿಸಿದ್ದಾರೆ ಹಾಗೂ ಬೆದರಿಕೆ ಒಡ್ಡಿದ್ದಾರೆ. ಮತದಾರರ ಚೀಟಿಯನ್ನು ಪರಿಶೀಲಿಸುವ ಸಂದರ್ಭ ಮತದಾರರಿಗೆ ಅನಗತ್ಯವಾಗಿ ಕಿರುಕುಳ ನೀಡಿರುವುದು ಮತದಾನಕ್ಕೆ ಅಡ್ಡಿ ಉಂಟು ಮಾಡಿದೆ. ಚುನಾವಣಾ ಆಯೋಗ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ನ್ಯಾಯಯುತ ಮತದಾನದ ಖಾತರಿ ನೀಡಬೇಕು’’ ಎಂದು ಎಸ್ಪಿ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದೆ.
ಸಂಭಾಲ್ನ ಇನ್ನೊಂದು ವೀಡಿಯೊದಲ್ಲಿ ಮತಗಟ್ಟೆಯೊಂದರಿಂದ ಪೊಲೀಸರು ಓಡಿಸಿದ ನಂತರ ದೊಡ್ಡ ಸಂಖ್ಯೆಯ ಮತದಾರರು ಹೊರ ಬರುತ್ತಿರುವುದು ಕಂಡು ಬಂದಿದೆ. ತಮಗೆ ಮತದಾನ ಮಾಡಲು ಅವಕಾಶ ನೀಡಲಿಲ್ಲ ಎಂದು ಪ್ರತಿಪಾದಿಸಿ ಕೆಲವು ಮುಸ್ಲಿಮ್ ಮಹಿಳೆಯರು ಮತಗಟ್ಟೆಯಿಂದ ಹಿಂದಿರುಗುತ್ತಿರುವುದನ್ನು ಕೂಡ ವೀಡಿಯೊ ತೋರಿಸಿದೆ. ಇದಲ್ಲದೆ, ಸಮಾಜವಾದಿ ಪಕ್ಷದ ಬೆಂಬಲಿಗರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆ ಕೂಡ ವೀಡಿಯೊದಲ್ಲಿ ದಾಖಲಾಗಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ವರಿಷ್ಠ ಅಖಿಲೇಶ್ ಯಾದವ್, ‘‘ಪೊಲೀಸ್ ಹಾಗೂ ಆಡಳಿತದ ನಡವಳಿಕೆ ಸೂಕ್ತವಾದುದು ಅಲ್ಲ’’ ಎಂದು ಹೇಳಿದ್ದಾರೆ.