"ಧ್ವನಿಯನ್ನಡಗಿಸುವ, ಬೆದರಿಸುವ ಪ್ರಯತ್ನ": ಅದಾನಿ ಪ್ರಕರಣದಲ್ಲಿ ಸೆಬಿಯ ಶೋಕಾಸ್ ನೋಟಿಸ್ ಕುರಿತು ಹಿಂಡೆನ್‌ಬರ್ಗ್ ಪ್ರತಿಕ್ರಿಯೆ

Update: 2024-07-02 11:13 GMT

Photo: PTI

ಹೊಸದಿಲ್ಲಿ: ಅದಾನಿ ಗ್ರೂಪ್‌ನ ಶೇರುಗಳ ವಹಿವಾಟುಗಳಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸೆಬಿಯಿಂದ ಶೋಕಾಸ್ ನೋಟಿಸ್‌ನ್ನು ತಾನು ಸ್ವೀಕರಿಸಿರುವುದಾಗಿ ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್‌ಬರ್ಗ್ ರೀಸರ್ಚ್ ಸೋಮವಾರ ತಿಳಿಸಿದೆ.

ಸೆಬಿಯ 46 ಪುಟಗಳ ಶೋಕಾಸ್ ನೋಟಿಸ್‌ನ್ನು ಪೂರ್ವ-ನಿರ್ದೇಶಿತ ಉದ್ದೇಶವನ್ನು ಪೂರೈಸಲು ಸಿದ್ಧಪಡಿಸಲಾಗಿದೆ,ಇದು ಭಾರತದ ಅತ್ಯಂತ ಶಕ್ತಿಶಾಲಿಗಳು ನಡೆಸಿರುವ ಭ್ರಷ್ಟಾಚಾರ ಮತ್ತು ವಂಚನೆಗಳನ್ನು ಬಯಲಿಗೆಳೆಯುವವರನ್ನು ಮೌನಗೊಳಿಸುವ ಮತ್ತು ಬೆದರಿಸುವ ಪ್ರಯತ್ನವಾಗಿದೆ ಎಂದು ತಿಳಿಸಿರುವ ಹಿಂಡೆನ್‌ಬರ್ಗ್,‘ಜನವರಿ 2023ರ ನಮ್ಮ ವರದಿ ಪ್ರಕಟಣೆಯ ಬೆನ್ನಲ್ಲೇ ಅದಾನಿಗೆ ಸೆಬಿಯ ಗುಪ್ತ ನೆರವು ಆರಂಭಗೊಂಡಿತ್ತು ಎನ್ನುವುದನ್ನು ಭಾರತೀಯ ಮಾರುಕಟ್ಟೆಯಲ್ಲಿನ ಮೂಲಗಳೊಂದಿಗೆ ಚರ್ಚೆಗಳಿಂದ ನಾವು ತಿಳಿದುಕೊಂಡಿದ್ದೇವೆ’ ಎಂದು ಹೇಳಿದೆ.

ಹಿಂಡೆನ್‌ಬರ್ಗ್ 2023, ಜ.24ರಂದು ಅದಾನಿ ಗ್ರೂಪ್ ಲೆಕ್ಕಪತ್ರ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿ ವರದಿಯೊಂದನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಮಾರುಕಟ್ಟೆಗಳಲ್ಲಿ ಅದಾನಿ ಗ್ರೂಪ್ ಶೇರುಗಳ ಬೆಲೆಗಳು ತೀವ್ರವಾಗಿ ಕುಸಿದಿದ್ದವು.

ಈ ವರದಿಯ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯವು ಮಾರ್ಚ್ 2023ರಲ್ಲಿ ಸೆಬಿಗೆ ಆದೇಶಿಸಿತ್ತು.

‘ನಮ್ಮ ವರದಿಯ ಬಳಿಕ ಸೆಬಿ ತೆರೆಮರೆಯಲ್ಲಿ ಬ್ರೋಕರ್‌ಗಳಿಗೆ ಗಂಭೀರ,ಶಾಶ್ವತ ತನಿಖೆಗಳ ಬೆದರಿಕೆಯೊಡ್ಡಿ ಅದಾನಿ ಶೇರುಗಳಲ್ಲಿನ ಶಾರ್ಟ್ ಪೊಸಿಷನ್‌ಗಳನ್ನು ಮುಚ್ಚುವಂತೆ ಒತ್ತಡ ಹೇರಿತ್ತು ಮತ್ತು ತನ್ಮೂಲಕ ಪರಿಣಾಮಕಾರಿಯಾಗಿ ಖರೀದಿ ಬೇಡಿಕೆಗಳನ್ನು ಸೃಷ್ಟಿಸಿತ್ತು ಮತ್ತು ಅದಾನಿ ಶೇರುಗಳಿಗೆ ಪೂರಕ ವಾತಾವರಣವನ್ನು ಕಲ್ಪಿಸಿತ್ತು ಎಂದು ನಮಗೆ ಮಾಹಿತಿ ಲಭಿಸಿತ್ತು ’ ಎಂದು ಹಿಂಡೆನ್‌ಬರ್ಗ್ ಸೋಮವಾರ ಆರೋಪಿಸಿದೆ.

ವರದಿಯನ್ನು ಪ್ರಕಟಿಸುವಾಗ ತಾನು ಅದಾನಿ ಶೇರುಗಳಲ್ಲಿ ಶಾರ್ಟ್ ಪೊಸಿಷನ್ ಹೊಂದಿರುವುದಾಗಿ ಹಿಂಡೆನ್‌ಬರ್ಗ್ ಬಹಿರಂಗಗೊಳಿಸಿತ್ತು. ಅಂದರೆ ಅದು ಅದಾನಿ ಶೇರುಗಳ ಬೆಲೆಗಳಲ್ಲಿ ಕುಸಿತವನ್ನು ನಿರೀಕ್ಷಿಸಿತ್ತು ಮತ್ತು ಅವುಗಳಲ್ಲಿ ಟ್ರೇಡ್ ಮಾಡಿತ್ತು.

ಸೆಬಿ ತನ್ನ ನೋಟಿಸ್‌ನಲ್ಲಿ ಕೋಟಕ್ ಬ್ಯಾಂಕ್‌ನ್ನು ಹೆಸರಿಸುವಲ್ಲಿ ಸ್ಪಷ್ಟವಾಗಿ ವಿಫಲಗೊಂಡಿದೆ,ಬದಲಿಗೆ ಅದು ಕೆ-ಇಂಡಿಯಾ ಅಪಾರ್ಚುನಿಟೀಸ್ ಫಂಡ್ ಎಂದಷ್ಟೇ ಹೆಸರಿಸಿದೆ ಮತ್ತು ‘ಕೋಟಕ್’ಹೆಸರನ್ನು ‘ಕೆಎಂಐಎಲ್ (ಕೋಟಕ್ ಮಹೀಂದ್ರಾ ಇನ್ವೆಸ್ಟ್‌ಮೆಂಟ್ ಲಿಮಿಟೆಡ್) ಎಂಬ ಸಂಕ್ಷಿಪ್ತ ರೂಪದಿಂದ ಮರೆಮಾಚಿತ್ತು ಎಂದೂ ಹಿಂಡೆನ್‌ಬರ್ಗ್ ಹೇಳಿದೆ. ತನ್ನ ಹೂಡಿಕೆ ಪಾಲುದಾರ ಅದಾನಿ ಶೇರುಗಳನ್ನು ಶಾರ್ಟ್ ಮಾಡಲು ಬಳಸಿದ್ದ ಸಾಗರೋತ್ತರ ನಿಧಿಯನ್ನು ಕೋಟಕ್ ಬ್ಯಾಂಕ್ ಸೃಷ್ಟಿಸಿತ್ತು ಮತ್ತು ಮೇಲ್ವಿಚಾರಣೆಯನ್ನು ಹೊಂದಿತ್ತು ಎಂದು ಅದು ತಿಳಿಸಿದೆ.

‘ಕೋಟಕ್ ಅಥವಾ ಇತರ ಯಾವುದೇ ಕೋಟಕ್ ಮಂಡಳಿ ಸದಸ್ಯರನ್ನು ಸೆಬಿ ಹೆಸರಿದಿರುವುದು ಮತ್ತೋರ್ವ ಶಕ್ತಿಶಾಲಿ ಭಾರತೀಯ ಉದ್ಯಮಿಯನ್ನು ಪರಿಶೀಲನೆಯಿಂದ ರಕ್ಷಿಸುವ ಉದೇಶವನ್ನು ಹೊಂದಿದೆ ಎಂದು ನಾವು ಶಂಕಿಸಿದ್ದೇವೆ ’ಎಂದೂ ಹಿಂಡೆನ್‌ಬರ್ಗ್ ಹೇಳಿದೆ.

ಹೂಡಿಕೆದಾರ ಸಂಸ್ಥೆಯನ್ನು ಹೆಸರಿಸದೆ ಹಿಂಡೆನ್‌ಬರ್ಗ್,ಅದು ಅದಾನಿ ಶೇರುಗಳನ್ನು ಶಾರ್ಟ್ ಮಾಡುವ ಮೂಲಕ 4.1 ಮಿಲಿಯ ಡಾಲರ್‌ಗಳ ಒಟ್ಟು ಆದಾಯವನ್ನು ಗಳಿಸಿದೆ ಮತ್ತು ತಾನೂ ಅದಾನಿಯ ಯುಎಸ್ ಬಾಂಡ್‌ಗಳನ್ನು ಶಾರ್ಟ್ ಮಾಡುವ ಮೂಲಕ 31,000 ಡಾಲರ್ ಗಳ ಲಾಭವನ್ನು ಗಳಿಸಿದ್ದೇನೆ ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News