ಆಸ್ಟ್ರೇಲಿಯಾದ ವರ್ಕಿಂಗ್ ಹಾಲಿಡೇ ವೀಸಾಕ್ಕೆ 40,000 ಭಾರತೀಯರಿಂದ ಅರ್ಜಿ ಸಲ್ಲಿಕೆ

Update: 2024-10-14 15:11 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಆಸ್ಟ್ರೇಲಿಯಾದ ನೂತನ ‘ವರ್ಕಿಂಗ್ ಹಾಲಿಡೇ ಮೇಕರ್’ ವೀಸಾ ಕಾರ್ಯಕ್ರಮದಡಿ 1,000 ವೀಸಾಗಳಿಗೆ ಕೇವಲ ಎರಡು ವಾರಗಳಲ್ಲಿ ಸುಮಾರು 40,000 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಆ ದೇಶದ ಸಹಾಯಕ ವಲಸೆ ಸಚಿವ ಮ್ಯಾಟ್ ಥಿಸಲ್ತ್‌ವೇಟ್ ಸೋಮವಾರ ತಿಳಿಸಿದರು.

ಆಸ್ಟ್ರೇಲಿಯನ್ ವರ್ಕಿಂಗ್ ಹಾಲಿಡೇ ಮೇಕರ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 18ರಿಂದ 30 ವರ್ಷ ವಯೋಮಾನದ ಭಾರತೀಯರು ಆಸ್ಟ್ರೇಲಿಯದಲ್ಲಿ 12 ತಿಂಗಳು ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನವನ್ನು ನಡೆಸಲು ಅವಕಾಶ ಕಲ್ಪಿಸುವ ಈ ವೀಸಾ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಗೊಳಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.

ವೀಸಾಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅ.1ರಿಂದ ಆರಂಭಗೊಂಡಿದ್ದು, ಮಾಸಾಂತ್ಯದಲ್ಲಿ ಕೊನೆಗೊಳ್ಳಲಿದೆ. ನಂತರ ಯಶಸ್ವಿ ಅಭ್ಯರ್ಥಿಗಳನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುವುದು ಮತ್ತು ಆಯ್ಕೆಯಾದವರು ಮುಂದಿನ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮ ವಾಸ್ತವ್ಯವನ್ನು ಆರಂಭಿಸಬಹುದು ಎಂದು ಅವರು ತಿಳಿಸಿದರು.

ಈ ವೀಸಾ ಯುವ ಭಾರತೀಯರಿಗೆ ಆಸ್ಟ್ರೇಲಿಯಾದ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸದ ಅನುಭವವನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ ಥಿಸಲ್ತ್‌ವೇಟ್, ನೀವು ಮಾಡಬಹುದಾದ ಉದ್ಯೋಗದ ಮೇಲೆ ಯಾವುದೇ ನಿರ್ಬಂಧಗಳಿಲ್ಲ ಎನ್ನುವುದು ವರ್ಕಿಂಗ್ ಹಾಲಿಡೇ ಮೇಕರ್ ವೀಸಾದ ವಿಶೇಷವಾಗಿದೆ. 1,000 ವೀಸಾಗಳಿಗಾಗಿ ಈವರೆಗೆ 40,000 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News