ಹಂಗಾಮಿ ಡಿಜಿಪಿಗಳನ್ನು ನೇಮಿಸುವುದನ್ನು ಕೈಬಿಡಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಿ: ರಾಜ್ಯಗಳಿಗೆ ಗೃಹ ಸಚಿವಾಲಯದ ಸೂಚನೆ

Update: 2024-02-18 09:46 GMT

Photo : indianexpress

ಹೊಸದಿಲ್ಲಿ: ಕೆಲವು ರಾಜ್ಯ ಸರಕಾರಗಳು ಅರ್ಹ ಅಧಿಕಾರಿಗಳು ಲಭ್ಯವಿದ್ದರೂ ನಿಯಮಿತ ಡಿಜಿಪಿಗಳನ್ನು ನೇಮಿಸದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಇಂತಹ ನೇಮಕಾತಿಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಈ ರಾಜ್ಯಗಳಿಗೆ ಸೂಚಿಸಿದೆ. ಗೃಹ ಸಚಿವಾಲಯವು ಭಾರತೀಯ ಪೋಲಿಸ್ ಸೇವೆ (ಐಪಿಎಸ್)ಯ ಕೇಡರ್ ನಿಯಂತ್ರಣ ಪ್ರಾಧಿಕಾರವಾಗಿದೆ.

ಈ ಕುರಿತು ಕೇಂದ್ರ ಗೃಹ ಕಾರ್ಯದರ್ಶಿಗಳ ಕಚೇರಿಯು ಕಳೆದ ವಾರ ಹಂಗಾಮಿ ಡಿಜಿಪಿಗಳು ಪೋಲಿಸ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಉತ್ತರಾಖಂಡ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ರವಾನಿಸಿದೆ.

ಸರ್ವೋಚ್ಚ ನ್ಯಾಯಾಲಯವು ಪ್ರಕಾಶ ಸಿಂಗ್ ಪ್ರಕರಣದಲ್ಲಿ ಡಿಜಿಪಿಗಳ ನೇಮಕಾತಿಗಳ ಕುರಿತು ಹೊರಡಿಸಿರುವ ನಿರ್ದೇಶನಗಳನ್ನು ಪತ್ರದಲ್ಲಿ ಒತ್ತಿ ಹೇಳಲಾಗಿದೆ. ತಾತ್ಕಾಲಿಕ ಅಥವಾ ಪ್ರಭಾರ ಡಿಜಿಪಿಗಳನ್ನು ನೇಮಕಗೊಳಿಸುವುದನ್ನು ಕೈಬಿಡಬೇಕು,ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅಂತಹ ನೇಮಕಗಳನ್ನು ಮಾಡಬಹುದು ಎಂಬ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲೇಖಿಸಿರುವ ಪತ್ರವು,ಎರಡು ವರ್ಷಗಳ ಅವಧಿಗೆ ನಿಯಮಿತ ಡಿಜಿಪಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಗಳು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಮತ್ತು ಕೇಂದ್ರ ಲೋಕಸೇವಾ ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News