ಬಿ20 ಶೃಂಗಸಭೆ| ಭಾರತವು ಹಸಿರು ಇಂಧನದ ಮೇಲೆ ಗಮನ ಕೇಂದ್ರೀಕರಿಸಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಭಾರತವು ಹಸಿರು ಇಂಧನದ ಮೇಲೆ ಗಮನವನ್ನು ಕೇಂದ್ರೀಕರಿಸಿದೆ ಎಂದು ರವಿವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು,ಕ್ರಿಪ್ಟೋ ಕರೆನ್ಸಿಗಳಿಗಾಗಿ ಜಾಗತಿಕ ಸಮಗ್ರ ಕಾರ್ಯವಿಧಾನಕ್ಕೆ ಮತ್ತು ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಗೆ ಕರೆಯನ್ನು ನೀಡಿದರು. ವರ್ಷಕ್ಕೊಮ್ಮೆ ‘ಅಂತರರಾಷ್ಟ್ರೀಯ ಗ್ರಾಹಕ ರಕ್ಷಣೆ ದಿನ ’ ಆಚರಣೆಗೆ ಮತ್ತು ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ನ ಪ್ರಚಲಿತ ಪರಿಪಾಠವನ್ನು ‘ಗ್ರೀನ್ ಕ್ರೆಡಿಟ್ ’ಗೆ ಬದಲಿಸಿಕೊಳ್ಳುವಂತೆಯೂ ಅವರು ಕರೆ ನೀಡಿದರು.
ಬಿ20 ಶೃಂಗಸಭೆ ಭಾರತ 2023ರಲ್ಲಿ ದೇಶದಲ್ಲಿ ಉದ್ಯಮದ ವಿವಿಧ ಮಗ್ಗಲುಗಳ ಕುರಿತು ಮಾತನಾಡಿದ ಮೋದಿ,ಉದ್ಯಮ 4.0 ಯುಗದಲ್ಲಿ ಭಾರತವು ಡಿಜಿಟಲ್ ಕ್ರಾಂತಿಯ ಮುಖವಾಗಿದೆ ಎಂದು ಹೇಳಿದರು. ಸಮರ್ಥ ಮತ್ತು ವಿಶ್ವಾಸಾರ್ಹ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸುವಲ್ಲಿ ಭಾರತವು ನಿರ್ಣಾಯಕ ಸ್ಥಾನವನ್ನು ತಲುಪಿದೆ ಎಂದೂ ಅವರು ಉಲ್ಲೇಖಿಸಿದರು.
ಭಾರತದಲ್ಲಿ ಉದ್ಯಮದ ಮಹತ್ವ:
ಉದ್ಯಮಗಳು ಸಣ್ಣದಿರಲಿ ಅಥವಾ ದೊಡ್ಡದಾಗಿರಲಿ,ಅವು ಸಾಮರ್ಥ್ಯವನ್ನು ಸಮೃದ್ಧಿಯನ್ನಾಗಿ,ಅಡೆತಡೆಗಳನ್ನು ಅವಕಾಶಗಳನ್ನಾಗಿ ಮತ್ತು ಆಕಾಂಕ್ಷೆಗಳನ್ನು ಸಾಧನೆಗಳನ್ನಾಗಿ ಪರಿವರ್ತಿಸಬಲ್ಲವು ಎಂದು ಹೇಳಿದ ಮೋದಿ,ಚಂದ್ರಯಾನ-3ರಲ್ಲಿ ಇಸ್ರೋ ಪ್ರಮುಖ ಪಾತ್ರವನ್ನು ಹೊಂದಿತ್ತು,ಆದರೆ ಅದರೊಂದಿಗೆ ಭಾರತೀಯ ಕೈಗಾರಿಕೆ,ಎಂಎಸ್ಎಂಇಗಳು ಮತ್ತು ಖಾಸಗಿ ಕಂಪನಿಗಳೂ ಈ ಅಭಿಯಾನಕ್ಕೆ ತಮ್ಮ ಕೊಡುಗೆಗಳನ್ನು ಸಲ್ಲಿಸಿವೆ. ಇದು ವಿಜ್ಞಾನ ಮತ್ತು ಉದ್ಯಮ ಇವೆರಡರ ಯಶಸ್ಸು ಆಗಿದೆ ಎಂದರು.
► ಹಸಿರು ಇಂಧನ ಕುರಿತು ಮೋದಿ
‘ನಾವು ಭಾರತದಲ್ಲಿ ಹಸಿರು ಇಂಧನದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದ್ದೇವೆ. ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಸೌರಶಕ್ತಿಯ ಯಶಸ್ಸನ್ನು ಪುನರಾವರ್ತಿಸುವ ಗುರಿಯನ್ನು ನಾವು ಹೊಂದಿದ್ದೇವೆ ’ ಎಂದರು.
ಕ್ರಿಪ್ಟೋ ಕರೆನ್ಸಿಗಳ ಕುರಿತು
ಕ್ರಿಪ್ಟೋ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಸವಾಲುಗಳಿವೆ. ಈ ವಿಷಯದಲ್ಲಿ ಗರಿಷ್ಠ ಸಂಯೋಜಿತ ನಿಲುವು ಅಗತ್ಯವಿದೆ. ಎಲ್ಲ ಪಾಲುದಾರರ ಹಿತಾಸಕ್ತಿಗಳ ಕಾಳಜಿ ವಹಿಸುವ ಜಾಗತಿಕ ಕಾರ್ಯವಿಧಾನವೊಂದನ್ನು ರೂಪಿಸುವ ಅಗತ್ಯವಿದೆ ಎಂದು ತಾನು ಭಾವಿಸಿದ್ದೇನೆ ಎಂದು ಮೋದಿ ಹೇಳಿದರು. ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದ ಮೋದಿ,ಇಂದು ಜಗತ್ತು ಕೃತಕ ಬುದ್ಧಿಮತ್ತೆ ಕುರಿತು ಬಹಳಷ್ಟು ಉತ್ಸುಕವಾಗಿದೆ. ಆದರೆ ಈ ಉತ್ಸುಕತೆಯ ನಡುವೆಯೇ ಕೆಲವು ನೈತಿಕ ಪರಿಗಣನೆಗಳೂ ಇವೆ. ಕೌಶಲ್ಯ ಮತ್ತು ಮರುಕೌಶಲ್ಯಕ್ಕೆ ಸಂಬಂಧಿಸಿದಂತೆ ಅಲ್ಗಾರಿದಂ ತಾರತಮ್ಯ ಮತ್ತು ಸಮಾಜದ ಮೇಲೆ ಅದರ ಪರಿಣಾಮದ ಕುರಿತು ಕಳವಳಗಳು ವ್ಯಕ್ತವಾಗುತ್ತಿವೆ. ಇಂತಹ ಸಮಸ್ಯೆಗಳನ್ನು ಒಂದಾಗಿ ಬಗೆಹರಿಸಿಕೊಳ್ಳಬೇಕು ಎಂದರು.
‘ನಾವು ವಿವಿಧ ಕ್ಷೇತ್ರಗಳಲ್ಲಿಯ ಸಂಭಾವ್ಯ ಅಡಚಣೆಗಳನ್ನು ಗ್ರಹಿಸಬೇಕಿದೆ. ಜಾಗತಿಕ ಚೌಕಟ್ಟಿನಡಿ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ ’ ಎಂದ ಅವರು,ಹೀಗಾಗಿ ನೈತಿಕ ಕೃತಕ ಬುದ್ಧಿಮತ್ತೆ ಬಳಕೆಯನ್ನು ಖಚಿತಪಡಿಸಲು ಒಟ್ಟಾಗಿ ಶ್ರಮಿಸುವಂತೆ ಉದ್ಯಮ ಸಮುದಾಯಗಳು ಮತ್ತು ಸರಕಾರಗಳಿಗೆ ಕರೆ ನೀಡಿದರು.
► ಗ್ರಾಹಕರ ಹಕ್ಕುಗಳ ಕುರಿತು
ಕೇವಲ ಗ್ರಾಹಕ ಹಕ್ಕುಗಳನ್ನು ಆಚರಿಸುವುದರ ಬದಲು ಗ್ರಾಹಕರ ರಕ್ಷಣೆಯ ಮೇಲೆ ಗಮನ ಕೇಂದ್ರೀಕರಿಸುವಂತೆ ಉದ್ಯಮಗಳನ್ನು ಕೋರಿದ ಮೋದಿ,ವರ್ಷದಲ್ಲಿ ಒಂದು ದಿನವನ್ನು ‘ಅಂತರರಾಷ್ಟ್ರೀಯ ಗ್ರಾಹಕ ರಕ್ಷಣೆ ದಿನ’ವನ್ನಾಗಿ ಆಚರಿಸುವಂತೆ ಸಲಹೆ ನೀಡಿದರು.
ಉದ್ಯಮ ನಿರ್ಧಾರಗಳು ಮತ್ತು ನಮ್ಮ ಜೀವನಶೈಲಿ ಭೂಗ್ರಹಕ್ಕೆ ಪೂರಕವಾಗಿರಬೇಕು,ಆಗ ಮಾತ್ರ ಈಗಿರುವ ಸಮಸ್ಯೆಗಳನ್ನು ಪರಿಹರಿಸಬಹುದು. ನಮ್ಮ ನಿರ್ಧಾರಗಳು ನಮ್ಮ ಭೂಮಿಯ ಮೇಲೆ ಯಾವ ಪರಿಣಾಮವನ್ನು ಬೀರುತ್ತವೆ ಎನ್ನುವುದನ್ನು ಯೋಚಿಸುವುದು ನಮ್ಮ ಹೊಣೆಗಾರಿಕೆಯಾಗಿದೆ.
ಪ್ರಧಾನಿ ಮೋದಿ