ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ ಗೆ ನುಗ್ಗಿದ ಹಿಂದುತ್ವ ಗುಂಪಿನಿಂದ ಬಾಬರಿ ಮಸೀದಿ ಚಿತ್ರಕ್ಕೆ ಬೆಂಕಿ

Update: 2024-01-23 16:06 GMT

Photo: Screengrab via Saba Khan/X

ಪುಣೆ: ಹಿಂದುತ್ವ ಸಂಘಟನೆಗಳಿಗೆ ಸೇರಿದ ಗುಂಪೊಂದು ಮಂಗಳವಾರ ಪುಣೆಯಲ್ಲಿರುವ ಭಾರತೀಯ ಚಿತ್ರ ಮತ್ತು ಟೆಲಿವಿಶನ್ ಸಂಸ್ಥೆ (FTII)ಗೆ ನುಗ್ಗಿ ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಚಿತ್ರವೊಂದನ್ನು ಸುಟ್ಟು ಹಾಕಿದೆ.

1992ರಲ್ಲಿ ಉರುಳಿಸಲಾದ ಬಾಬರಿ ಮಸೀದಿಗೆ ಸಂಬಂಧಿಸಿದ ಚಿತ್ರ ಅದಾಗಿತ್ತು. ‘‘ಜೈ ಶ್ರೀರಾಮ್’’ ಎಂಬ ಘೋಷಣೆಗಳನ್ನು ಕೂಗುತ್ತಾ ಮತ್ತು 17ನೇ ಶತಮಾನದ ಮರಾಠ ರಾಜ ಶಿವಾಜಿಗೆ ಜೈಕಾರ ಹಾಕುತ್ತಾ ಗುಂಪು ಎಫ್ಟಿಐಐ ಆವರಣಕ್ಕೆ ನುಗ್ಗುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಲಾದ ವೀಡಿಯೊಗಳು ತೋರಿಸುತ್ತವೆ. ಕೆಲವರು ‘‘ಸಂವಿಧಾನದ ಸಾವು, ಬಾಬರಿಯನ್ನು ನೆನಪಿಸಿಕೊಳ್ಳಿ’’ ಎಂದು ಬರೆಯಲಾಗಿರುವ ಚಿತ್ರವೊಂದನ್ನು ಸುಡುವುದೂ ವೀಡಿಯೊದಲ್ಲಿ ಕಾಣುತ್ತದೆ. ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಚಿತ್ರಗಳನ್ನು ಪ್ರದರ್ಶಿಸುವ ಫಲಕವೊಂದನ್ನೂ ಅವರು ನಾಶಪಡಿಸಿದರು.

ಆಕ್ರಮಣಕಾರರು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಕಪ್ ನೊಕ್ವೋಹಮ್, ಪ್ರಧಾನ ಕಾರ್ಯದರ್ಶಿ ಸಯಂತನ್ ಚಕ್ರವರ್ತಿ ಹಾಗೂ ಓರ್ವ ವಿದ್ಯಾರ್ಥಿನಿ ಸೇರಿದಂತೆ ಇತರ ಇಬ್ಬರ ಮೇಲೆ ಆಕ್ರಮಣ ಮಾಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘‘ವಿವಿಧ ಬಲಪಂಥೀಯ ಸಂಘಟನೆಗಳ ಕೆಲವು ಸದಸ್ಯರು ಮಂಗಳವಾರ ಮಧ್ಯಾಹ್ನ ಎಫ್ಟಿಐಐ ಕ್ಯಾಂಪಸ್‌ ಗೆ ಪ್ರವೇಶಿಸಿ, ಘೋಷಣೆಗಳನ್ನು ಕೂಗುತ್ತಾ ಬಾಬರಿ ಮಸೀದಿಯ ಚಿತ್ರವನ್ನು ಸುಟ್ಟು ಹಾಕಿದರು’’ ಎಂದು ಡೆಕ್ಕನ್ ಜಿಂಖಾನ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.

‘‘ಈ ಹಂತದಲ್ಲಿ, ಬಲಪಂಥೀಯ ಸಂಘಟನೆಗಳ ಸದಸ್ಯರು ಮತ್ತು ಎಫ್ಟಿಐಐ ವಿದ್ಯಾರ್ಥಿಗಳ ಗುಂಪೊಂದರ ನಡುವೆ ಘರ್ಷಣೆ ಸಂಭವಿಸಿತು. ಪೊಲೀಸರಿಗೆ ಮಾಹಿತಿ ತಲುಪಿದ ಬಳಿಕ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು’’ ಎಂದು ಅವರು ಹೇಳಿದರು.

‘‘ಹತ್ತಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಇದ್ದರೂ ದುಷ್ಕರ್ಮಿಗಳ ಗುಂಪು ಒಳಗೆ ನುಗ್ಗಿತು’’ ಎಂದು ವಿದ್ಯಾರ್ಥಿಯೊಬ್ಬರು ‘ಮಕ್ತೂಬ್ ಮೀಡಿಯ’ದೊಂದಿಗೆ ಮಾತನಾಡುತ್ತಾ ತಿಳಿಸಿದರು. ಈ ದಾಳಿಯಲ್ಲಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು, ಅವರು ದುಷ್ಕರ್ಮಿಗಳು ವಿದ್ಯಾರ್ಥಿಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ನೋಡುತ್ತಿದ್ದರು ಎಂದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News