ಬದ್ಲಾಪುರ ಪ್ರಕರಣ | ಆರೋಪಿಯ ತಂದೆಯ ಅರ್ಜಿ ತುರ್ತು ವಿಚಾರಣೆಗೆ ಬಾಂಬೆ ಹೈಕೋರ್ಟ್ ಒಪ್ಪಿಗೆ
ಮುಂಬೈ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ತನ್ನ ಮಗನ ದಫನಕ್ಕೆ ಸ್ಥಳ ನೀಡುವಂತೆ ಮುನಿಸಿಪಾಲಿಟಿಗೆ ನಿರ್ದೇಶನ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಹೋಗಿರುವ ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂದೆಯ ತಂದೆಯ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ಶುಕ್ರವಾರ ಅನುಮೋದನೆ ನೀಡಿದೆ.
ಮಹಾರಾಷ್ಟ್ರದ ಬದ್ಲಾಪುರ ಪಟ್ಟಣದ ಖಾಸಗಿ ಶಾಲೆಯೊಂದರ ಇಬ್ಬರು ನರ್ಸರಿ ವಿದ್ಯಾರ್ಥಿನಿಯರ ಮೇಲೆ ಶಾಲೆಯ ಸ್ವಚ್ಛತಾ ಕೆಲಸಗಾರ ಅಕ್ಷಯ್ ಶಾಲೆಯ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು.
ಇತ್ತೀಚೆಗೆ ಎರಡನೇ ಪತ್ನಿಯು ಆರೋಪಿಯ ವಿರುದ್ಧ ಸಲ್ಲಿಸಿರುವ ದೂರಿನ ಆಧಾರದಲ್ಲಿ ಥಾಣೆ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಆತನು ತನ್ನೊಂದಿಗಿದ್ದ ಒಬ್ಬ ಪೊಲೀಸ್ ಅಧಿಕಾರಿಯ ಬಂದೂಕನ್ನು ಕಸಿದು ಪೊಲೀಸರ ಮೇಲೆ ಗುಂಡು ಹಾರಿಸಿದನು ಎಂದು ಪೊಲೀಸರು ಹೇಳಿದ್ದಾರೆ. ಆಗ ಬೆಂಗಾವಲು ವಾಹನದಲ್ಲಿದ್ದ ಒರ್ವ ಪೊಲೀಸ್ ಅಧಿಕಾರಿ ಆರೋಪಿಯ ಮೇಲೆ ಗುಂಡು ಹಾರಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನ್ನ ಮಗನ ಶವಸಂಸ್ಕಾರಕ್ಕೆ ಸ್ಥಳ ನೀಡಬೇಕು ಎಂಬುದಾಗಿ ಅಂಬರ್‌ನಾತ್ ಮುನಿಸಿಪಲ್ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡುವಂತೆ ಕೋರಿ ಆರೋಪಿಯ ತಂದೆ ಬಾಂಬೆ ಹೈಕೋರ್ಟ್‌ಗೆ ಹೋಗಿದ್ದಾರೆ.
ಅಂತ್ಯ ಸಂಸ್ಕಾರದ ವೇಳೆ ಭದ್ರತೆ ನೀಡಬೇಕು ಎಂಬುದಾಗಿಯೂ ಅಕ್ಷಯ್ ಶಿಂದೆಯ ಕುಟುಂಬಿಕರು ಒತ್ತಾಯಿಸಿದ್ದಾರೆ. ತನ್ನ ಶವವನ್ನು ದಹನ ಮಾಡುವ ಬದಲು, ಹೂಳಬೇಕು ಎಂಬ ಇಚ್ಛೆಯನ್ನು ಅಕ್ಷಯ್ ಒಮ್ಮೆ ವ್ಯಕ್ತಪಡಿಸಿದ್ದನು ಎಂದು ಆತನ ವಕೀಲರು ಹೇಳಿದ್ದಾರೆ.