ಬಾಳಾಸಾಹೇಬ್ ಠಾಕ್ರೆ, ಆರೆಸ್ಸೆಸ್ ಕೂಡಾ ತುರ್ತು ಪರಿಸ್ಥಿತಿಗೆ ಬೆಂಬಲ ಘೋಷಿಸಿದ್ದರು: ಸಂಜಯ್ ರಾವುತ್

Update: 2024-07-13 10:49 GMT

ಸಂಜಯ್ ರಾವತ್‌ (Photo: PTI)

ಮುಂಬೈ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗಿ 50 ವರ್ಷ ಕಳೆದು ಹೋಗಿದೆ. ಆದರೆ ಬಿಜೆಪಿ ಭವಿಷ್ಯದ ಬಗ್ಗೆ ಗಮನ ಹರಿಸುವ ಬದಲು ಹಿಂದಿನ ಘಟನೆಗಳನ್ನೇ ಕೆದಕುತ್ತಿದೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಟೀಕಿಸಿದ್ದಾರೆ.

ತುರ್ತು ಪರಿಸ್ಥಿತಿ ಹೇರಿಕೆಯಾದ ಜೂನ್ 25ನ್ನು ಪ್ರತಿ ವರ್ಷ ಸಂವಿಧಾನ ಹತ್ಯಾ ದಿವಸವಾಗಿ ಆಚರಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ರಾವತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆ ಅವಧಿಯಲ್ಲಿ ಅಮಾನವೀಯ ನೋವನ್ನು ಅನುಭವಿಸಿದವರ ಗೌರವಾರ್ಥವಾಗಿ ಈ ದಿನವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಮಿತ್ ಶಾ ಹೇಳಿದ್ದರು. ಪಿಟಿಐ ವಿಡಿಯೊ ಜತೆಗೆ ಮಾತನಾಡಿದ ಅವರು, ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ ಮೋದಿ ಸರ್ಕಾರದ ಇಡೀ ಆಡಳಿತಾವಧಿ ತುರ್ತು ಪರಿಸ್ಥಿತಿಯಂತೆಯೇ ಇದೆ ಎಂದು ಹೇಳಿದರು.

ಕೆಲವರು ದೇಶದಲ್ಲಿ ಅರಾಜಕತೆ ಸೃಷ್ಠಿಸಲು ಯತ್ನಿಸಿದ್ದರು. ಸರ್ಕಾರದ ಯಾವುದೇ ಆದೇಶಗಳನ್ನು ಪಾಲಿಸಬಾರದು ಎಂದು ಸೈನಿಕರು ಹಾಗೂ ಸೇನೆಗೆ ರಾಮ್‌ಲೀಲಾ ಮೈದಾನದಲ್ಲಿ ಬಹಿರಂಗ ಕರೆ ನೀಡಲಾಗಿತ್ತು. ಇಂಥಹ ಪರಿಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರೂ, ತುರ್ತು ಪರಿಸ್ಥಿತಿ ಹೇರುತ್ತಿದ್ದರು’ ಎಂದು ಹೇಳಿದ್ದಾರೆ.

ಅದು ರಾಷ್ಟ್ರೀಯ ಸುರಕ್ಷತೆಯ ವಿಷಯವಾಗಿತ್ತು. ಆ ವೇಳೆ ಬಾಳಾಸಾಹೇಬ್ ಠಾಕ್ರೆ, ಆರೆಸ್ಸೆಸ್ ಕೂಡಾ ತುರ್ತು ಪರಿಸ್ಥಿತಿಗೆ ಬಹಿರಂಗ ಬೆಂಬಲ ಘೋಷಿಸಿದ್ದರು ಎಂದು ರಾವತ್‌ ಹೇಳಿದ್ದಾರೆ.

"ಯಾರನ್ನು ಬೇಕಾದರೂ ಜೈಲಿಗೆ ತಳ್ಳಬಹುದು. ನ್ಯಾಯಾಲಯದ ಮೇಲೂ ಒತ್ತಡವಿದೆ. ಕೇಂದ್ರ ಸರ್ಕಾರ ಕೇಂದ್ರೀಯ ಏಜೆನ್ಸಿಗಳನ್ನು ನಿಯಂತ್ರಿಸುತ್ತಿದೆ. ನಿಮ್ಮ ವಿರೋಧಿಗಳನ್ನು ನೀವು ಜೈಲಿಗೆ ತಳ್ಳುತ್ತಿದ್ದೀರಿ. ಅರಾಜಕತೆ ಹೆಚ್ಚುತ್ತಿದೆ ಮತ್ತು ಚೀನಾ ಅತಿಕ್ರಮಣ ನಡೆಸುತ್ತಿದೆ. ಅಂದು ಕೂಡಾ ಇದೇ ಪರಿಸ್ಥಿತಿ ಇತ್ತು. ಇಂದಿರಾಗಾಂಧಿ ಇನ್ನೂ ಹೆಚ್ಚಿನ ಅಪಾಯಕಾರಿ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು" ಎಂದು ಬಣ್ಣಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News