ಮೀಸಲಾತಿಯಿಂದ ಲಾಭ ಪಡೆದಿರುವವರು ಹಿಂದುಳಿದವರಿಗೆ ದಾರಿ ಮಾಡಿಕೊಡಬೇಕು: ಸುಪ್ರೀಂ ಕೋರ್ಟ್

Update: 2024-02-07 09:06 GMT

Photo: PTI

ಹೊಸದಿಲ್ಲಿ: ಮೀಸಲಾತಿಯಿಂದ ಲಾಭ ಪಡೆದಿರುವವರು ತಮ್ಮ ಸಮುದಾಯದಲ್ಲೇ ಹೆಚ್ಚು ಹಿಂದುಳಿದಿರುವ ವ್ಯಕ್ತಿಗಳಿಗೆ ದಾರಿ ಮಾಡಿಕೊಡಬೇಕು ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ ಎಂದು The Indian Express ವರದಿ ಮಾಡಿದೆ.

ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠವು, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣ ಜಾರಿಗೆ ತರಲು ಸಾಧ್ಯವೆ ಎಂಬ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದೆ. 1975ರಲ್ಲಿ ಪಂಜಾಬ್ ಸರ್ಕಾರವು ಶೇ. 25ರಷ್ಟು ಮೀಸಲಾತಿಯನ್ನು ಎರಡು ಪ್ರವರ್ಗಗಳನ್ನಾಗಿ ವಿಂಗಡಿಸಿದ್ದರಿಂದ ಈ ಪ್ರಕರಣವು ನಡೆಯುತ್ತಿದೆ.

ʼನಿರ್ದಿಷ್ಟ ಪ್ರವರ್ಗದಲ್ಲಿ ಉಪ ವರ್ಗೀಕರಣ ಜಾರಿಗೊಳಿಸುವುದರ ಹಿಂದಿನ ಚಿಂತನೆ ಕೆಲವು ಉಪ ಜಾತಿಗಳು ಈಗ ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದು, ಅವು ಸಾಮಾನ್ಯ ಪ್ರವರ್ಗಗಳೊಂದಿಗೆ ಸ್ಪರ್ಧಿಸಬೇಕು ಎಂದೇʼ ಎಂದು ನ್ಯಾ. ವಿಕ್ರಮ್ ನಾಥ್ ಪ್ರಶ್ನಿಸಿದರು.

“ಯಾಕೆ ಮೀಸಲಾತಿಯಲ್ಲಿ ವಿನಾಯಿತಿ ಇಲ್ಲ? ಹಿಂದುಳಿದ ಜಾತಿಗಳಲ್ಲೇ ಈಗಲೂ ಹಿಂದುಳಿದಿರುವವರು ಮೀಸಲಾತಿಯನ್ನು ಪಡೆಯಲಿ. ಒಂದು ಬಾರಿ ನೀವು ಮೀಸಲಾತಿ ಪರಿಕಲ್ಪನೆಯನ್ನು ಸಾಧಿಸಿದ ನಂತರ, ನೀವು ಮೀಸಲಾತಿಯಿಂದ ಹಿಂದೆಗೆಯಬೇಕು” ಎಂದು ಅವರು ಸೂಚಿಸಿದರು.

ಉಪ ವರ್ಗೀಕರಣದ ಹಿಂದಿರುವ ಪರಿಕಲ್ಪನೆಯೇ ಅದು ಎಂದು ಪಂಜಾಬ್ ಅಡ್ವೋಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಪ್ರತಿಪಾದಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ನಾಗರಿಕ ಸೇವಾ ಅಧಿಕಾರಿಗಳಾಗಿರುವವರ ಮಕ್ಕಳು ಮೀಸಲಾತಿ ಪಡೆಯುವುದನ್ನು ಮುಂದುವರಿಸಬೇಕೆ ಎಂದು ನ್ಯಾ. ಬಿ.ಎಸ್.ಗವಾಯಿ ಕೂಡಾ ಪ್ರಶ್ನಿಸಿದರು.

“ಯಾವುದೇ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರುವ ವ್ಯಕ್ತಿಯು ಐಎಎಸ್, ಐಪಿಎಸ್ ಅಥವಾ ಐಎಫ್ಎಸ್ ಅಧಿಕಾರಿಯಾದ ನಂತರ ಅವರ ಮಕ್ಕಳು ಅದೇ ಪ್ರವರ್ಗದ ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತಿರುವ ಇತರೆ ಹಿಂದುಳಿದ ವ್ಯಕ್ತಿಗಳು ಅನುಭವಿಸುವ ಅನನುಕೂಲವನ್ನು ಅನುಭವಿಸುವುದಿಲ್ಲ. ಆದರೆ, ಮೀಸಲಾತಿಯ ಹಾಲಿ ಸ್ಥಿತಿಯ ಕಾರಣಕ್ಕೆ ಅಂಥವರ ಎರಡನೆ ಮತ್ತು ಮೂರನೆ ತಲೆಮಾರು ಮೀಸಲಾತಿ ಲಾಭಕ್ಕೆ ಅರ್ಹರಾಗುತ್ತಿದ್ದಾರೆ” ಎಂದೂ ಹೇಳಿದರು.

ಆದರೆ, ಅಂತಹ ವ್ಯಕ್ತಿಗಳನ್ನು ಕೆನೆಪದರಕ್ಕೆ ಸೇರ್ಪಡೆ ಮಾಡಿ, ಆ ಮೂಲಕ ಅವರನ್ನು ಮೀಸಲಾತಿಯಿಂದ ಹೊರಗಿಡಲಾಗುತ್ತದೆ ಎಂದು ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಇಬ್ಬರೂ ನ್ಯಾಯಾಲಯದ ಗಮನಕ್ಕೆ ತಂದರು.

ಪ್ರಕರಣದ ವಿಚಾರಣೆ ಇಂದೂ (ಬುಧವಾರ) ಕೂಡಾ ಸುಪ್ರೀಂ ಕೋರ್ಟ್ ನಲ್ಲಿ ಮುಂದುವರಿಯಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News