ರಾಷ್ಟ್ರೀಯ ಲಾಂಛನಕ್ಕೆ ಅವಮಾನ | ಬಂಗಾಳದ ಬಿಜೆಪಿ ಅಧ್ಯಕ್ಷರಿಗೆ ಚುನಾವಣಾ ಆಯೋಗದ ಶೋಕಾಸ್ ನೋಟಿಸ್

Update: 2024-11-11 16:13 GMT

 ಸುಕಾಂತ ಮಜುಮ್ದಾರ್ | PC : PTI 

ಕೋಲ್ಕತಾ : ರಾಷ್ಟ್ರೀಯ ಲಾಂಛನ ಮತ್ತು ರಾಜ್ಯ ಪೋಲಿಸರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಕೇಂದ್ರ ಸಚಿವ ಹಾಗೂ ಪ.ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಮ್ದಾರ್ ಅವರಿಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ಹೊರಡಿಸಿದೆ. ಟಿಎಂಸಿ ಪಕ್ಷವು ಮುಜುಮ್ದಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.

ಉಪಚುನಾವಣೆ ನಡೆಯಲಿರುವ ತಲದಂಗ್ರಾ ವಿಧಾನಸಭಾ ಕ್ಷೇತ್ರದಲ್ಲಿ ನ.7ರಂದು ಚುನಾವಣಾ ರ‍್ಯಾಲಿ ಸಂದರ್ಭ,ಪೋಲಿಸ್ ಸಿಬ್ಬಂದಿಗಳು ತಮ್ಮ ಸಮವಸ್ತ್ರಗಳಲ್ಲಿ ರಾಷ್ಟ್ರೀಯ ಲಾಂಛನದ ಬದಲು ಪಾದರಕ್ಷೆಗಳನ್ನು ಹೋಲುವ ಚಿಹ್ನೆಗಳನ್ನು ಧರಿಸಬೇಕು ಎಂದು ಹೇಳುವ ಮೂಲಕ ಮಜುಮ್ದಾರ್ ಭಾರತದ ರಾಷ್ಟ್ರೀಯ ಲಾಂಛನ ಮತ್ತು ರಾಜ್ಯ ಪೋಲಿಸರನ್ನು ಅವಮಾನಿಸಿದ್ದಾರೆ ಎಂದು ಟಿಎಂಸಿ ತನ್ನ ದೂರಿನಲ್ಲಿ ಆರೋಪಿಸಿದೆ.

ನಿಗದಿತ ಗಡುವಿನೊಳಗೆ ಶೋಕಾಸ್ ನೋಟಿಸ್ಗೆ ಉತ್ತರಿಸದಿದ್ದರೆ ಈ ವಿಷಯಲ್ಲಿ ನಿಮಗೆ ಹೇಳುವುದೇನೂ ಇಲ್ಲ ಎಂದು ಪರಿಗಣಿಸಲಾಗುವುದು ಮತ್ತು ನಿಮ್ಮ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಲಾಗುವುದು ಎಂದು ಚುನಾವಣಾ ಆಯೋಗದ ನೋಟಿಸ್ನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News