ಬಂಗಾಳಿ ಕವಿ ನಝ್ರತ್ ಇಸ್ಲಾಮ್ ಗೀತೆಯ ರಾಗದ ಮರು ಸಂಯೋಜನೆ: ಟೀಕೆಗೆ ಗುರಿಯಾದ ಎ.ಆರ್.ರೆಹಮಾನ್
ಕೋಲ್ಕತ್ತಾ: ನೂತನ ಬಾಲಿವುಡ್ ಚಿತ್ರವೊಂದರಲ್ಲಿ ಪ್ರಖ್ಯಾತ ಬಂಗಾಳಿ ಕವಿ ಕಾಝಿ ನಝ್ರುಲ್ ಇಸ್ಲಾಮ್ ಅವರ ಜನಪ್ರಿಯ ಗೀತೆಯೊಂದರ ಲಯ ಮತ್ತು ರಾಗವನ್ನು ಮರು ಸಂಯೋಜಿಸಿ ಪ್ರಸ್ತುತ ಪಡಿಸಿರುವ ವಿವಾದಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಗುರಿಯಾಗಿದ್ದು, ಇದರ ವಿರುದ್ಧ ಕವಿಯ ಕುಟುಂಬದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಶಾನ್ ಕಟ್ಟರ್ ಹಾಗೂ ಮೃಣಾಲ್ ಠಾಕೂರ್ ಮುಖ್ಯ ಪಾತ್ರದಲ್ಲಿರುವ ಯುದ್ಧ ಕೇಂದ್ರಿತ ಚಿತ್ರವಾದ ‘ಪಿಪ್ಪ’ದಲ್ಲಿನ ‘ಕರಾರ್ ಓಯಿ ಲೌಹೊ ಕೋಪಟ್’ (ಜೈಲಿನ ಉಕ್ಕಿನ ಕಂಬಿಗಳು) ಎಂಬ ಗೀತೆಯ ಮರು ಸಂಯೋಜನೆಯು ಇತ್ತೀಚೆಗೆ ಬಿಡುಗಡೆಗೊಂಡಿತ್ತು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಶನಿವಾರ PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ನಝ್ರಲ್ ಅವರ ಮೊಮ್ಮಗ ಹಾಗೂ ಚಿತ್ರ ಕಲಾವಿದ ಕಾಝಿ ಅನಿರ್ಬನ್, “ಚಿತ್ರಕ್ಕೆ ಆ ಗೀತೆಯನ್ನು ಬಳಸಿಕೊಳ್ಳಲು ನನ್ನ ತಾಯಿ ಒಪ್ಪಿಗೆ ನೀಡಿದ್ದರಾದರೂ, ರಾಗವನ್ನು ಬದಲಿಸಲು ಅನುಮತಿ ನೀಡಿರಲಿಲ್ಲ. ಲಯ ಮತ್ತು ರಾಗವನ್ನು ಬದಲಿಸಿ ಗೀತೆಯನ್ನು ಪ್ರಸ್ತುತಪಡಿಸಿರುವ ರೀತಿ ಆಘಾತಕಾರಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಬಂಡಾಯ ಕವಿ’ ಎಂದೇ ಜನಪ್ರಿಯರಾಗಿರುವ ನಝ್ರುಲ್ ಇಸ್ಲಾಂ, ಬಾಂಗ್ಲಾದೇಶದ ರಾಷ್ಟ್ರ ಕವಿಯಾಗಿದ್ದಾರೆ ಮತ್ತು ಭಾರತದ ಪಶ್ಚಿಮ ಬಂಗಾಳದಲ್ಲಿ ಪೂಜ್ಯನೀಯ ಮತ್ತು ಪ್ರೀತಿಪಾತ್ರ ವ್ಯಕ್ತಿಯಾಗಿದ್ದಾರೆ.
ಅಮೆರಿಕಾದಿಂದ ಧ್ವನಿ ಸಂದೇಶ ಕಳಿಸಿರುವ ನಝ್ರುಲ್ ರ ಮೊಮ್ಮಗಳಾದ ಅನಿಂದಿತ ಕಾಝಿ, “ನಝ್ರುಲ್ ಕುಟುಂಬದ ಸದಸ್ಯರಾಗಿ ಹಾಗೂ ಅವರ ರಚನೆಯ ಪ್ರೇಮಿಗಳಾಗಿ ನಾವು ಈ ಮರು ಸಂಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಗೀತೆಯನ್ನು ಚಿತ್ರದಿಂದ ಕೈಬಿಡಬೇಕು ಹಾಗೂ ಸಾರ್ವಜನಿಕ ತಾಣಗಳಿಂದ ತೆಗೆದು ಹಾಕಬೇಕು ಎಂದು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಈ ಅಪಚಾರದ ಕೃತ್ಯದಿಂದ ಭಾವನೆಗಳಿಗೆ ಘಾಸಿಯಾಗಿದೆ ಎಂದು ಜನಪ್ರಿಯ ಬಂಗಾಳಿ ಗಾಯಕಿ ಹೈಮಂತಿ ಶುಕ್ಲಾ ಬೇಸರ ವ್ಯಕ್ತಪಡಿಸಿದ್ದಾರೆ.
“ಎ.ಆರ್.ರಹಮಾನ್ ರಂಥ ಸಂಗೀತ ಸಂಯೋಜಕರು ಹೀಗೆ ಹೇಗೆ ಮಾಡುತ್ತಾರೆ ಎಂದು ನನಗೆ ಅಚ್ಚರಿಯಾಗುತ್ತಿದೆ. ಕಾಝಿ ನಝ್ರುಲ್ ಇಸ್ಲಾಮ್ ಅವರ ಗೀತೆಗಳನ್ನು ಈ ರೀತಿ ಹೊಸದಾಗಿ ಪ್ರಸ್ತುತಪಡಿಸುವುದನ್ನು ಅನುಮತಿಸಲಾಗುವುದಿಲ್ಲ. ಈ ಮರು ಸಂಯೋಜನೆಯ ಭಾಗವಾಗಿರುವ ಬಂಗಾಳಿ ಗಾಯಕರಿಗೆ ಇದು ನಾಚಿಕೆಯ ಸಂಗತಿಯಾಗಿದೆ. ನಾನು ತೀವ್ರ ಆಕ್ರೋಶಗೊಂಡಿದ್ದೇನೆ” ಎಂದು ಅವರು ಕಿಡಿ ಕಾರಿದ್ದಾರೆ.
ಈ ಗೀತೆಯ ಸಾಹಿತ್ಯವು 1922ರಲ್ಲಿ ಪ್ರಥಮ ಬಾರಿಗೆ ‘ಬಾಂಗ್ಲರ್ ಕಥಾ’ ನಿಯತಕಾಲಿಕದಲ್ಲಿ ಪ್ರಕಟವಾಗಿತ್ತು ಹಾಗೂ ಈ ಗೀತೆಯನ್ನು ನಝ್ರುಲ್ ಅವರ ‘ಭಂಗಾರ್ ಗಾನ್’ ಕವನ ಸಂಕಲನದಲ್ಲಿ ಸೇರ್ಪಡೆ ಮಾಡಲಾಗಿತ್ತು. ಈ ಗೀತೆಯನ್ನು 1949ರಲ್ಲಿ ಪ್ರಥಮ ಬಾರಿಗೆ ಖ್ಯಾತ ಸಂಗೀತ ಧ್ವನಿ ಮುದ್ರಣ ಸಂಸ್ಥೆಯೊಂದು ಧ್ವನಿ ಮುದ್ರಿಸಿಕೊಂಡಿತ್ತು. ಇದಾದ ನಂತರ 1952ರಲ್ಲಿ ಮತ್ತೊಂದು ಸಂಗೀತ ಧ್ವನಿ ಮುದ್ರಣ ಸಂಸ್ಥೆಯು ಈ ಗೀತೆಯ ಮರು ಧ್ವನಿ ಮುದ್ರಣ ಮಾಡಿತ್ತು.
ಈ ಮರು ರಾಗ ಸಂಯೋಜನೆಯ ವಿರುದ್ಧ ಸಾಮಾಜಿಕ ಮಾಧ‍್ಯಮಗಳಲ್ಲೂ ಆಕ್ರೋಶ ವ್ಯಕ್ತವಾಗಿದ್ದು, ಎ.ಆರ್.ರಹಮಾನ್ ಈ ಗೀತೆಗೆ ರಾಗ ಸಂಯೋಜಿಸುವ ಮುನ್ನ ಸಂಶೋಧನೆಯನ್ನೇನಾದರೂ ಮಾಡಿದ್ದರೆ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಆಕ್ರೋಶವನ್ನು ಟೀಕಿಸಿರುವ ಇತಿಹಾಸಕಾರ-ಸಂಶೋಧಕ ಚಿನ್ಮಯ್ ಗುಹಾ, ಬಂಗಾಳಿಗಳು ನಝ್ರುಲ್ ಅವರ ಕೃತಿಗಳನ್ನು ವಿರಳವಾಗಿ ಓದಿ ಅಥವಾ ಕೇಳಿದ್ದರೂ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ, ಈ ವಿವಾದ ಕುರಿತ ಪ್ರತಿಕ್ರಿಯೆಗೆ ರಹಮಾನ್ ಲಭ್ಯರಾಗಿಲ್ಲ.