ಬೆಂಗಳೂರು ರಸ್ತೆಯಲ್ಲಿ ಸಿಲುಕಿಕೊಂಡ ಹೆಲಿಕಾಪ್ಟರ್, ಟ್ರಾಫಿಕ್ ಜಾಮ್!
ಬೆಂಗಳೂರು : ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡ ಆಂಬ್ಯುಲೆನ್ಸ್, ವಿಐಪಿ ವಾಹನ, ತುರ್ತು ಸೇವಾ ವಾಹನ ಎಂದೆಲ್ಲಾ ಸುದ್ದಿಯನ್ನು ನೀವು ಕೇಳಿರಬಹುದು. ಈ ಬಾರಿ ಆಗಸದಲ್ಲಿ ಹಾರುವ ಹೆಲಿಕಾಪ್ಟರೊಂದು ರಸ್ತೆ ಮಧ್ಯದಲ್ಲಿ ಸಿಲುಕಿಕೊಂಡು ಟ್ರಾಫಿಕ್ ಜಾಮ್ ಆದ ಸುದ್ದಿ ಬಂದಿದೆ. ಸದಾ ಟ್ರಾಫಿಕ್ ಜಾಮ್ ವಿಚಾರಕ್ಕೆ ಸುದ್ದಿಯಾಗುವ ಬೆಂಗಳೂರಿನಲ್ಲಿ ಈ ಘಟನೆ ವರದಿಯಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಮನ್ ಸುರಾನ ಎಂಬವರು ರಸ್ತೆ ಮಧ್ಯೆ ಹೆಲಿಕಾಪ್ಟರ್ ಸಿಲುಕಿಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಎಚ್ಎಎಲ್ (ಹಿಂದೂಸ್ತಾನ್ ಎರೋನಾಟಿಕಲ್ ಲಿಮಿಟೆಡ್) ಬಳಿ ಈ ಘಟನೆ ನಡೆದಿದೆ. ಒಂದು ಕಾರ್ಖಾನೆಯ ಆವರಣದಿಂದ ಮುಂದಿನ ಆವರಣಕ್ಕೆ ಕೊಂಡೊಯ್ಯುವಾಗ ಹೆಲಿಕಾಪ್ಟರ್ ರಸ್ತೆ ದಾಟುವುದು ವಾಡಿಕೆ. ಈ ರೀತಿ ಕೊಂಡೊಯ್ಯುವಾಗ ಹೆಲಿಕಾಪ್ಟರ್ ರಸ್ತೆ ಮಧ್ಯೆ ನಿಂತಿದೆ. ಅದರ ಸುತ್ತ ಸಿಬ್ಬಂದಿಗಳು ನಿಂತಿದ್ದಾರೆ. ಕಿರಿದಾದ ರಸ್ತೆಯಾದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನಗಳು ನಿಂತಿರುವುದು ಚಿತ್ರದಲ್ಲಿ ಕಾಣುತ್ತಿದೆ. ಸೆ.7 ರ ಸಂಜೆಯ ವೇಳೆಗೆ ಈ ಘಟನೆ ನಡೆದಿದೆ. ಈ ಬಗ್ಗೆ ಅಧಿಕೃತವಾಗಿ ಎಚ್ಎಎಲ್ ಯಾವ ಮಾಹಿತಿಯನ್ನೂ ನೀಡಿಲ್ಲ.
ಹಲವು ಮೀಮ್‌ಗಳಿಗೆ ಕಾರಣವಾಗುತ್ತಿರುವ ಬೆಂಗಳೂರು ಟ್ರಾಫಿಕ್ ಪಟ್ಟಿಗೆ ಈಗ ಹೆಲಿಕಾಪ್ಟರ್‌ನಿಂದ ಉಂಟಾದ ಟ್ರಾಫಿಕ್ ಜಾಮ್ ಸೇರ್ಪಡೆಯಾಗಿದೆ. ಎಚ್ಎಎಲ್ ಬಳಿ ವಾಸಿಸುವ ಉದ್ಯೋಗಿಗಳು ಈ ಚಿತ್ರವನ್ನು ತಾವು ಕಚೇರಿಗೆ ಬರಲು ತಡವಾಗಿದ್ದಕ್ಕೆ ಕಾರಣ ಎಂದು ಬಳಸಬಹುದು ಎಂದು ಎಕ್ಸ್ ಬಳಕೆದಾರರೊಬ್ಬರು ಕಾಲೆಳೆದಿದ್ದಾರೆ.
@peakbengaluru Bangalore Traffic reasons #G20India2023 #Bengaluru @HALHQBLR pic.twitter.com/jK353vFyGp
— Aman Surana (@surana620) September 7, 2023