ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವ್ಲಾಖಗೆ ಬಾಂಬೆ ಹೈಕೋರ್ಟ್ ನಿಂದ ಜಾಮೀನು

Update: 2023-12-19 15:15 GMT

ಬಾಂಬೆ ಹೈಕೋರ್ಟ್

ಮುಂಬೈ: 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ, ಮಾನವಹಕ್ಕುಗಳ ಕಾರ್ಯಕರ್ತ ಗೌತಮ್ ನವ್ಲಾಖರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.

ಆದರೆ, ಈ ತೀರ್ಪಿನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗುವಂತೆ ತನ್ನ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

2018ರಲ್ಲಿ ಪುಣೆ ಸಮೀಪದ ಭೀಮಾ ಕೋರೆಗಾಂವ್ ನಲ್ಲಿ ನಡೆದ ಜಾತಿ ಸಂಘರ್ಷಕ್ಕೆ ಸಂಬಂಧಿಸಿದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಗೌತಮ್ ನವ್ಲಾಖರನ್ನು ಬಂಧಿಸಲಾಗಿತ್ತು. ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಒಟ್ಟು 16 ಮಂದಿಯನ್ನು ಬಂಧಿಸಲಾಗಿತ್ತು.

ಗೌತಮ್ ನವ್ಲಾಖರನ್ನು 2018 ಆಗಸ್ಟ್‌ ನಲ್ಲಿ ಬಂಧಿಸಲಾಗಿತ್ತು. ನ್ಯಾಯಮೂರ್ತಿ ಕೆ.ಎಮ್. ಜೋಸೆಫ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವೊಂದರ ಆದೇಶದಂತೆ, ಕಳೆದ ವರ್ಷದ ನವೆಂಬರ್ 19ರಿಂದ ಅವರನ್ನು ಗೃಹಬಂಧನದಲ್ಲಿಡಲಾಗಿದೆ. ಈಗ ನ್ಯಾ. ಜೋಸೆಫ್ ನಿವೃತ್ತರಾಗಿದ್ದಾರೆ.

ಜೈಲಿನಲ್ಲಿ ಲಭಿಸುವ ಕಳಪೆ ಸೌಲಭ್ಯಗಳು ಮತ್ತು ತನ್ನ ಆರೋಗ್ಯವನ್ನು ಗಣನೆಗೆ ತೆಗೆದುಕೊಂಡು ನನ್ನನ್ನು ಗೃಹ ಬಂಧನದಲ್ಲಿಡುವಂತೆ ನವ್ಲಾಖ ಸಲ್ಲಿಸಿದ ಅರ್ಜಿಯ ಬಳಿಕ ಸುಪ್ರೀಂ ಕೋರ್ಟ್ ಆ ತೀರ್ಪು ನೀಡಿತ್ತು.

ಬಂಧನಕ್ಕೊಳಗಾದವರಲ್ಲಿ ಮಾನವಹಕ್ಕುಗಳ ಕಾರ್ಯಕರ್ತರಾದ ಅರುಣ್ ಫೆರೇರ, ವರ್ನನ್ ಗೊನ್ಸಾಲ್ವಿಸ್, ಆನಂದ್ ತೇಲ್ತುಂಬ್ಡೆ, ಕವಿ ವರವರ ರಾವ್ ಮತ್ತು ವಕೀಲೆ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತೆ ಸುಧಾ ಭಾರದ್ವಾಜ್ ಗೆ ಜಾಮೀನು ಲಭಿಸಿದೆ. ಇನ್ನೋರ್ವ ಆರೋಪಿ, ಬುಡಕಟ್ಟು ಜನರ ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿ ನ್ಯಾಯಾಂಗ ಕಸ್ಟಡಿಯಲ್ಲೇ ಮೃತಪಟ್ಟಿದ್ದಾರೆ.

ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅರಣ್ಯ ಹಕ್ಕುಗಳ ಕಾರ್ಯಕರ್ತ ಮಹೇಶ್ ರಾವುತ್ ರಿಗೂ ಬಾಂಬೆ ಹೈಕೋರ್ಟ್ ಸೆಪ್ಟಂಬರ್ ನಲ್ಲಿ ಜಾಮೀನು ನೀಡಿತ್ತು. ಆದರೆ ಅವರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ನಿಷೇಧಿತ ಮಾವೋವಾದಿ ಸಂಘಟನೆಗಳೊಂದಿಗೆ ರಾವುತ್ ನಂಟು ಹೊಂದಿದ್ದಾರೆ ಎನ್ನುವುದನ್ನು ತೋರಿಸುವ ಪುರಾವೆಯಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೇಳಿಕೊಂಡ ಬಳಿಕ ಅವರ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News