ಬಿಹಾರ | ಬಿಜೆಪಿ - ಆರ್ ಜೆ ಡಿ ಕಾರ್ಯಕರ್ತರ ನಡುವೆ ಘರ್ಷಣೆ

Update: 2024-05-21 14:55 GMT

PC :PTI 

ಪಾಟ್ನಾ: ಬಿಹಾರದ ಸರನ್ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಬಿಜೆಪಿ ಹಾಗೂ ಆರ್ ಜೆ ಡಿ ಕಾರ್ಯಕರ್ತರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಮೃತಪಟ್ಟಿದ್ದಾನೆ ಹಾಗೂ ಇತರ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಸರನ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಹಾಗೂ ಆರ್ ಜೆ ಡಿ ವರಿಷ್ಠ ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಸರನ್ ಲೋಕಸಭಾ ಕ್ಷೇತ್ರಕ್ಕೆ ಸೋಮವಾರ ನಡೆದ ಐದನೇ ಹಂತದ ಮತದಾನದ ಸಂದರ್ಭ ಮತದಾನ ನಡೆದಿದೆ.

ರೋಹಿಣಿ ಆಚಾರ್ಯ ಅವರು ಸೋಮವಾರ ಛಾಪ್ರಾ ಮತಗಟ್ಟೆಗೆ ಆಗಮಿಸುತ್ತಿದ್ದಂತೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಭುಗಿಲೆದ್ದಿತು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಕೆಲವರು ಗುಂಡಿನ ದಾಳಿ ನಡೆಸಿದರು.

ಗುಂಡಿನ ದಾಳಿಯಿಂದ ಒಬ್ಬರು ಮೃತಪಟ್ಟರು ಹಾಗೂ ಇಬ್ಬರು ಗಂಭೀರ ಗಾಯಗೊಂಡರು. ಗಾಯಗೊಂಡವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಛಾಪ್ರಾ ಜಿಲ್ಲಾ ಕೇಂದ್ರದ ಭಿಖಾರಿ ಠಾಕೂರ್ ಚೌಕ್ನಲ್ಲಿ ದೊಡ್ಡ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮಂಗಳವಾರದ ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News