ಬಿಹಾರ : ಚುನಾವಣಾ ರ‍್ಯಾಲಿಯಲ್ಲಿ ವೇದಿಕೆ ಕುಸಿತ, ರಾಹುಲ್ ಸ್ವಲ್ಪದರಲ್ಲಿ ಪಾರು
Update: 2024-05-27 16:00 GMT
ಪಾಟ್ನಾ : ಪಾಟ್ನಾದ ಹೊರವಲಯದ ಪಾಲಿಗಂಜ್ನಲ್ಲಿ ಸೋಮವಾರ ಚುನಾವಣಾ ರ‍್ಯಾಲಿಯಲ್ಲಿ ವೇದಿಕೆ ಭಾಗಶಃ ಕುಸಿದು ಬಿದ್ದಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ, ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ರ ಪುತ್ರಿ ಮಿಸಾ ಭಾರ್ತಿಯವರ ಪರ ಪ್ರಚಾರಕ್ಕಾಗಿ ರಾಹುಲ್ ಪಾಲಿಗಂಜ್ಗೆ ಆಗಮಿಸಿದ್ದರು.
ಭಾರ್ತಿ, ರಾಹುಲ್ ರನ್ನು ಅವರ ಸ್ಥಾನದತ್ತ ಕರೆದೊಯ್ಯುತ್ತಿದ್ದಾಗ ತಾತ್ಕಾಲಿಕ ವೇದಿಕೆಯ ಒಂದು ಭಾಗ ಕುಸಿದಿತ್ತು. ಈ ವೇಳೆ ರಾಹುಲ್ ಸಮತೋಲನ ಕಳೆದುಕೊಂಡಿದ್ದು, ಸಮಯಪ್ರಜ್ಞೆ ಮೆರೆದ ಭಾರ್ತಿ ಅವರ ಕೈಹಿಡಿದು ಸಮತೋಲನ ಕಾಯ್ದುಕೊಳ್ಳಲು ನೆರವಾದರು. ಈ ವೇಳೆ ನೆರವಿಗಾಗಿ ಧಾವಿಸಿದ್ದ ಭದ್ರತಾ ಸಿಬ್ಬಂದಿಗಳತ್ತ ಮುಗುಳ್ನಗು ಬೀರಿದ ಉಭಯ ನಾಯಕರು ಏನೂ ಆಗಿಲ್ಲ ಎಂದು ತಿಳಿಸಿದರು.