ವಿರೋಧ ಪಕ್ಷಗಳ ದೇಶವ್ಯಾಪಿ ಜಾತಿ ಗಣತಿ ಆಗ್ರಹಕ್ಕೆ ದನಿಗೂಡಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್

Update: 2024-08-26 08:30 GMT

 ಚಿರಾಗ್ ಪಾಸ್ವಾನ್ | PC : PTI 

ಹೊಸದಿಲ್ಲಿ: ದೇಶವ್ಯಾಪಿ ಜಾತಿ ಗಣತಿ ನಡೆಸಬೇಕು ಎಂಬ ವಿರೋಧ ಪಕ್ಷಗಳ ಆಗ್ರಹಕ್ಕೆ ಕೇಂದ್ರ ಸಚಿವ ಹಾಗೂ ಲೋಕ್ ಜನಶಕ್ತಿ ಪಕ್ಷ (ರಾಮ್ ವಿಲಾಸ್)ದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಕೂಡಾ ರವಿವಾರ ದನಿಗೂಡಿಸಿದ್ದಾರೆ. ಸರಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇದು ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಲೋಕ್ ಜನಶಕ್ತಿ ಪಕ್ಷ(ರಾಮವ ವಿಲಾಸ್) ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಅಂಗಪಕ್ಷವಾಗಿದೆ.

ಗುತ್ತಿಗೆಯ ಆಧಾರದಲ್ಲಿ ಹೀಂಬಾಗಿಲ ಪ್ರವೇಶ (ಲ್ಯಾಟರಲ್ ಎಂಟ್ರಿ) ಮೂಲಕ ಸಾರ್ವಜನಿಕ ಸೇವಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಕೇಂದ್ರ ಲೋಕಸೇವಾ ಆಯೋಗದ ನಡೆಯನ್ನು ಕಳೆದ ವಾರ ಚಿರಾಗ್ ಪಾಸ್ವಾನ್ ವಿರೋಧಿಸಿದ್ದರು.

ರಾಂಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಿರಾಗ್ ಪಾಸ್ವಾನ್, “ಜಾತಿ ಗಣತಿಗೆ ನಮ್ಮ ಪಕ್ಷದ ಬೆಂಬಲವಿದೆ. ಸರಕಾರವು ನಿಖರ ಜಾತಿ ಜನಸಂಖ್ಯೆಯನ್ನು ಹೊಂದಿರುವುದು ಅತ್ಯಗತ್ಯ ಎಂಬುದು ನಮ್ಮ ಭಾವನೆಯಾಗಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ಜಾತಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದ್ದು, ಈ ಗುಂಪುಗಳನ್ನು ಮುಖ್ಯ ವಾಹಿನಿಗೆ ಕರೆ ತರುವ ಗುರಿ ಹೊಂದಿವೆ” ಎಂದು ಹೇಳಿದರು.

ದೇಶವ್ಯಾಪಿ ಜಾತಿ ಗಣತಿ ನಡೆಯಬೇಕು ಎಂದು ತಮ್ಮ ಪಕ್ಷದ ನಿಲುವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ ನಂತರ, ಚಿರಾಗ್ ಪಾಸ್ವಾನ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News