ಲೋಕಸಭೆ ಚುನಾವಣೆಗೆ ಬಿಜೆಪಿ ಉಸ್ತುವಾರಿ ನೇಮಕ
ಹೊಸದಿಲ್ಲಿ : ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶನಿವಾರ 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಈ ಸಂಬಂಧ ಬಿಜೆಪಿ ಹೈಕಮಾಂಡ್ ರಾಜ್ಯವಾರು ಉಸ್ತುವಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ಚುನಾವಣಾ ಉಸ್ತುವಾರಿಯಾಗಿ ರಾಜ್ಯ ಸಭಾ ಸದಸ್ಯ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗ್ರವಾಲ್ ಹಾಗೂ ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಬಿಹಾರ ಚುನಾವಣಾ ಉಸ್ತುವಾರಿಯಾಗಿ, ಬೈಜಯಂತ್ ಜಯ್ ಪಾಂಡಾ ಅವರನ್ನು ಉತ್ತರಪ್ರದೇಶದ ಚುನಾವಣಾ ಉಸ್ತುವಾರಿಯಾಗಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಅವರನನ್ನು ಉತ್ತರಾಖಂಡದ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಲಕ್ಷ್ಮೀಕಾಂತ್ ಬಾಜಪೇಯಿ ಜಾರ್ಖಂಡ್‌ನ ಚುನಾವಣಾ ಉಸ್ತುವಾರಿಯಾಗಲಿದ್ದಾರೆ.
ಬಿಜೆಪಿ ರಾಜ್ಯ ಸಭಾ ಸದಸ್ಯ ಹಾಗೂ ಜಾರ್ಖಂಡ್ ಘಟಕದ ಮಾಜಿ ಮುಖ್ಯಸ್ಥ ದೀಪಕ್ ಪ್ರಕಾಶ್ ಅವರನ್ನು ಬಿಹಾರದ ಸಹ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.
ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಕೇರಳದ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಅವರನ್ನು ತಮಿಳುನಾಡಿನ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಬಿಜೆಪಿ ರಾಜ್ಯ ಸಭಾ ಸದಸ್ಯ ಹಾಗೂ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್ ಅವರನ್ನು ಹರ್ಯಾಣದ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ನಾಯಕ ಸುರೇಂದ್ರ ಸಿಂಗ್ ನಗರ್ ಅವರು ರಾಜ್ಯದ ಚುನಾವಣಾ ಸಹ ಉಸ್ತುವಾರಿಯಾಗಲಿದ್ದಾರೆ.
ಬಿಹಾರದ ಮಾಜಿ ಸಚಿವ ಹಾಗೂ ಪಶ್ಚಿಮಬಂಗಾಳದ ಬಿಜೆಪಿ ಉಸ್ತುವಾರಿ ಮಂಗಲ್ ಪಾಂಡೆ ಅವರನ್ನು ರಾಜ್ಯದ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ನಾಯಕ ಅಮಿತ್ ಮಾಲವಿಯ ಹಾಗೂ ಆಶಾ ಲಾಖ್ರಾ ಅವರನ್ನು ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಇತ್ತೀಚೆಗೆ ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಜಯ ಗಳಿಸಿರುವ ಮಧ್ಯಪ್ರದೇಶದಲ್ಲಿ ಬಿಜೆಪಿಯು ಉತ್ತರಪ್ರದೇಶದ ಎಂಎಲ್‌ಸಿ ಮಹೇಂದ್ರ ಸಿಂಗ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ಸತೀಶ್ ಉಪಾಧ್ಯಾಯ ಅವರನ್ನು ರಾಜ್ಯದ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ.
ಗುಜರಾತ್ ಮಾಜಿ ಮುಖ್ಯಮಂತ್ರಿ ಮತ್ತು ಪಂಬಾಜ್‌ನ ಬಿಜೆಪಿ ಉಸ್ತುವಾರಿ ವಿಜಯ್ ರೂಪಾನಿ ಅವರನ್ನು ರಾಜ್ಯಕ್ಕೆ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ನರೀಂದರ್ ಸಿಂಗ್ ಉಪ ಉಸ್ತುವಾರಿಯಾಗಿ ನೇಮಕ ಗೊಂಡಿದ್ದಾರೆ. ರೂಪಾನಿ ಚಂಡಿಗಢದ ಚುನಾವಣಾ ಉಸ್ತುವಾರಿಯಾಗಲಿದ್ದಾರೆ.
ಉತ್ತರಪ್ರದೇಶದ ಮಾಜಿ ಸಚಿವ ಶ್ರೀಕಾಂತ್ ಶರ್ಮಾ ಅವರನ್ನು ಹಿಮಾಚಲಪ್ರದೇಶದ ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ನೇಮಿಸಿದೆ. ಸಂಜಯ್ ಟಂಡನ್ ಸಹ ಉಸ್ತುವಾರಿಯಾಗಿರುತ್ತಾರೆ.
ಜಮ್ಮು ಹಾಗೂ ಕಾಶ್ಮೀರದ ರಾಜಕೀಯ ವ್ಯವಹಾರಗಳಿಗೆ ಬಿಜೆಪಿ ಸಹ ಉಸ್ತುವಾರಿಯಾಗಿರುವ ಆಶಿಸ್ ಸೂದ್ ಅವರನ್ನು ಗೋವಾ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದೆ. ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರನ್ನು ದಾಮನ್ ಹಾಗೂ ದೀಯುಗೆ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದ್ದು, ದುಷ್ಯಂತ್ ಪಟೇಲ್ ಅವರನ್ನು ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ.