ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾನಿ: ಆಪ್ ಸರಕಾರವನ್ನು ದೂಷಿಸಿದ ಬಿಜೆಪಿ

Update: 2025-01-27 22:30 IST
BR Ambedkar statue

PC : indiatoday.in \ X

  • whatsapp icon

ಅಮೃತಸರ: ಪಂಜಾಬಿನ ಅಮೃತಸರದಲ್ಲಿ ರವಿವಾರ 76ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ವ್ಯಕ್ತಿಯೋರ್ವ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಳೆತ್ತರದ ಪ್ರತಿಮೆಯ ಮೇಲೆ ಹತ್ತಿ ಅದನ್ನು ಸುತ್ತಿಗೆಯಿಂದ ಬಡಿದು ಹಾನಿಯನ್ನುಂಟು ಮಾಡಿದ್ದಾನೆ.

ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಕ್ತಿಯೋರ್ವ ಕೈಯಲ್ಲಿ ಸುತ್ತಿಗೆಯನ್ನು ಹಿಡಿದುಕೊಂಡು ಏಣಿಯನ್ನು ಬಳಸಿ ಪ್ರತಿಮೆಯ ಮೇಲೆ ಹತ್ತುತ್ತಿರುವುದನ್ನು ವೀಡಿಯೊ ತೋರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಗಾ ಜಿಲ್ಲೆಯ ನಿವಾಸಿಯನ್ನು ಪಂಜಾಬ್ ಪೋಲಿಸರು ಬಂಧಿಸಿದ್ದಾರೆ.

ಸೋಮವಾರ ಘಟನೆಯನ್ನು ಖಂಡಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು, ಈ ವಿಷಯದಲ್ಲಿ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು,ನಿಜವಾದ ಸಂಚುಕೋರನನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ ಎಂದು ರಾಜ್ಯದ ಸಚಿವ ಹರ್ಭಜನ್ ಸಿಂಗ್ ಹೇಳಿದರು.

►ಆಪ್ ಸರಕಾರದ ವಿರುದ್ಧ ಬಿಜೆಪಿ ದಾಳಿ

ಪಂಜಾಬಿನ ಆಪ್ ಸರಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು,ಈ ವಿಷಯದ ಬಗ್ಗೆ ಆಪ್ನ ಮೌನವನ್ನು ಪ್ರಶ್ನಿಸಿದ್ದಾರೆ.

ಅಮೃತಸರದಲ್ಲಿರುವ ಬಿ.ಆರ್.ಅಂಬೇಡ್ಕರ್ ಅವರ ಅತ್ಯಂತ ಎತ್ತರದ ಪ್ರತಿಮೆಗೆ ಆಪ್ನ ಪಂಜಾಬ್ ಸರಕಾರದ ಮೂಗಿನಡಿಗೇ ಸುತ್ತಿಗೆಯಿಂದ ಬಡಿದು ಹಾನಿಯನ್ನುಂಟು ಮಾಡಲಾಗಿದೆ. ಪ್ರತಿಮೆಯು ಪೋಲಿಸ್ ಠಾಣೆಯ ಎದುರಿನಲ್ಲಿಯೇ ಇದೆ. ಪ್ರತಿಮೆಯು ಎತ್ತರವಾಗಿದ್ದು, ಆರೋಪಿಗೆ ಏಣಿ ಸಿಕ್ಕಿದ್ದು ಹೇಗೆ? ಅರವಿಂದ ಕೇಜ್ರಿವಾಲ್ರ ಆಪ್ ಆಡಳಿತದ ಪಂಜಾಬಿನಲ್ಲಿ ಈ ಘಟನೆ ನಡೆದಿರುವಾಗ ಅವರ ಇಡೀ ತಂಡವು ಮೌನವಾಗಿದೆ ಎಂದು ಅವರು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಆಪ್ನ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಪಾತ್ರಾ,ಅವರ ಅನುಮತಿಯಿಲ್ಲದೆ ಪಂಜಾಬಿನಲ್ಲಿ ಈ ಘಟನೆ ನಡೆಯಲು ಸಾಧ್ಯವಿಲ್ಲ. ಕೇಜ್ರಿವಾಲ್ ಅಮೃತಸರಕ್ಕೆ ತೆರಳಿ ಅಂಬೇಡ್ಕರ್ ಪ್ರತಿಮೆ ಎದುರು ಕ್ಷಮೆ ಯಾಚಿಸಬೇಕು ಮತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News