ಅಕ್ರಮ ಮತದಾನ ನಡೆದಿದೆ ಎಂದು ಹಳೆಯ ವೀಡಿಯೋ ಪೋಸ್ಟ್‌ ಮಾಡಿದ್ದ ಬಿಜೆಪಿ ಕಾರ್ಪೊರೇಟರ್‌ ಬಂಧನ

Update: 2024-05-17 13:03 GMT

ಸಾಂದರ್ಭಿಕ ಚಿತ್ರ

ಹೈದರಾಬಾದ್:‌ ಮತಗಟ್ಟೆಯೊಂದರಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಹೇಳಿಕೊಂಡು ಹಳೆಯ ವೀಡಿಯೋ ಕ್ಲಿಪ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಆರೋಪದ ಮೇಲೆ ಹೈದರಾಬಾದ್‌ ನಗರದ ಮಲ್ಕಜ್ಗಿರಿ ಪ್ರದೇಶದ ಬಿಜೆಪಿ ಕಾರ್ಪೊರೇಟರ್‌ ಶ್ರವಣ್‌ ವುರಪಳ್ಳಿ ಹಾಗೂ ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಳೆಯ ವೀಡಿಯೋ ಕ್ಲಿಪ್‌ ಕುರಿತಂತೆ ಚುನಾವಣಾ ಆಯೋಗ ಬುಧವಾರ ದೂರು ದಾಖಲಿಸಿದ ನಂತರ ಆರೋಪಿಗಳ ಬಂಧನವಾಗಿದೆ.

ಈ ನಿರ್ದಿಷ್ಟ ವೀಡಿಯೋ 2022ರಲ್ಲಿ ನಡೆದ ಪಶ್ಚಿಮ ಬಂಗಾಳ ಮುನಿಸಿಪಲ್‌ ಚುನಾವಣೆಯ ಸಂದರ್ಭದ್ದಾಗಿತ್ತು. ಈ ಘಟನೆ ರಾಜ್ಯದ ದಕ್ಷಿಣ ಡಮ್‌ ಡಮ್‌ನ ವಾರ್ಡ್‌ ಸಂಖ್ಯೆ 33ರ ಬೂತ್‌ ಸಂಖ್ಯೆ 106ನಲ್ಲಿ ಮುನಿಸಿಪಲ್‌ ಚುನಾವಣೆ ವೇಳೆ ನಡೆದಿತ್ತು. ಚುನಾವಣಾ ಅಕ್ರಮವನ್ನು ಕೆಲ ಜನರು ನಡೆಸುತ್ತಿರುವುದು ಹಾಗೂ ಅಲ್ಲಿನ ಚುನಾವಣಾಧಿಕಾರಿಗಳು ಅದಕ್ಕೆ ಸಹಕರಿಸುತ್ತಿರುವುದು ಈ ವೀಡಿಯೋದಲ್ಲಿ ತೋರಿಸಲಾಗಿದೆ. ಈ ಹಳೆಯ ವೀಡಿಯೋ ಬಳಸಿಕೊಂಡು ಈ ಘಟನೆ ಹೈದರಾಬಾದ್‌ನ ಬಹಾದುರಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ನಡೆದಿದೆ ಎಂದು ಆರೋಪಿಗಳು ಸುದ್ದಿ ಮಾಡಿದ್ದರು.

ಇಲ್ಲಿ ಚುನಾವಣೆ ನ್ಯಾಯಯುತವಾಗಿ ನಡೆದಿದೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆರೋಪಿ ಕಾರ್ಪೊರೇಟರ್‌ ಅನ್ನು ಅಪಹರಿಸಲಾಗಿದೆ ಎಂದು ಆರಂಭದಲ್ಲಿ ಸುದ್ದಿಯಾಗಿದ್ದರೂ ನಂತರ ಆತನನ್ನು ಬಂಧಿಸಿದ್ದು ದೃಢಪಟ್ಟಿತ್ತು. ಇತರ ಬಂಧಿತರನ್ನು ನಂಪಳ್ಳಿಯ ಮೊಹಮ್ಮದ್‌ ಬಿನ್‌ ಆಲಿ, ಚಡೇರ್‌ಘಾಟ್‌ನ ಕಾಶಿ ಮತ್ತು ಮುಷಿರಾಬಾದ್‌ನ ಮಿಥಿಲೇಶ್‌ ಎಂದು ಗುರುತಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News