ಕೇಜ್ರಿವಾಲ್ ಬಂಧನದಿಂದ ಬಿಜೆಪಿ ವಿಶ್ವವ್ಯಾಪಿ ಟೀಕೆಗೆ ಗುರಿಯಾಗಿದೆ: ಅಖಿಲೇಶ್ ಯಾದವ್
ಹೊಸದಿಲ್ಲಿ: ಬಿಜೆಪಿಯು ಅಧಿಕಾರ ಕಳೆದುಕೊಳ್ಳುವ ಬಗ್ಗೆ ಚಿಂತಿತವಾಗಿದ್ದು, ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ರವಿವಾರ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದರು.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ಕ್ರಮಕ್ಕೆ ಬಿಜೆಪಿಯು ವಿಶ್ವವ್ಯಾಪಿ ಖಂಡನೆಗೆ ಗುರಿಯಾಗಿದೆ ಎಂದೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅಖಿಲೇಶ್ ಯಾದವ್ ಹೇಳಿದರು.
ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿರುವ ಅಖಿಲೇಶ್ ಯಾದವ್, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು. “ಬಿಜೆಪಿಯು ಅಧಿಕಾರ ಕಳೆದುಕೊಳ್ಳುವ ಬಗ್ಗೆ ಚಿಂತಿತವಾಗಿದೆ. ನಾವು (ವಿರೋಧ ಪಕ್ಷದ ನಾಯಕರು) ಇಂದು ದಿಲ್ಲಿಗೆ ಬಂದಿದ್ದರೆ, ಪ್ರಧಾನಿಯವರು ದಿಲ್ಲಿಯಿಂದ ಹೊರಗೆ ಹೋಗಿದ್ದಾರೆ. ಇದು ಯಾರು ಅಧಿಕಾರದಿಂದ ಹೊರ ಹೋಗಲಿದ್ದಾರೆ ಎಂಬುದನ್ನು ತೋರಿಸುತ್ತಿದೆ” ಎಂದು ವ್ಯಂಗ್ಯವಾಡಿದರು.
ಇಂದು ಸಂಜೆ ಮೀರತ್ ನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶದ ಕುರಿತು ಅವರು ಈ ರೀತಿ ಉಲ್ಲೇಖಿಸಿದರು.
ಚುನಾವಣಾ ಬಾಂಡ್ ಯೋಜನೆಯ ಕುರಿತು ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ ಅಖಿಲೇಶ್ ಯಾದವ್, “ಇದು ಹೊಸ ಆವಿಷ್ಕಾರವಾಗಿದೆ. ಈಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ಕೆಲಸಕ್ಕೆ ಹಚ್ಚಿ ಹಾಗೂ ನೀವು ಬಯಸಿದಷ್ಟು ದೇಣಿಗೆಯನ್ನು ಪಡೆಯಿರಿ” ಎಂದು ಕಿಡಿ ಕಾರಿದರು.