ಬಿಜೆಪಿ ಸರಕಾರ 10 ವರ್ಷಗಳಲ್ಲಿ ಹಿಂದಿನ ಸರಕಾರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಉದ್ಯೋಗಗಳನ್ನು ನೀಡಿದೆ : ಪ್ರಧಾನಿ ಮೋದಿ

Update: 2024-02-12 16:36 GMT

ನರೇಂದ್ರ ಮೋದಿ | Photo: PTI  

ಹೊಸದಿಲ್ಲಿ : ಹಿಂದಿನ ಸರಕಾರದ 10 ವರ್ಷಗಳ ಆಡಳಿತಾವಧಿಗೆ ಹೋಲಿಸಿದರೆ, ಅಷ್ಟೇ ಅವಧಿಯಲ್ಲಿ ತನ್ನ ಸರಕಾರವು ಒಂದೂವರೆ ಪಟ್ಟು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದರು.

ರೋಜಗಾರ್ ಮೇಲಾ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಒಂದು ಲಕ್ಷಕ್ಕೂ ಅಧಿಕ ಯುವಜನರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ವಿಳಂಬಿತ ನೇಮಕಾತಿ ಪ್ರಕ್ರಿಯೆಗಳಿಗಾಗಿ ಹಿಂದಿನ ಸರಕಾರವನ್ನು ಟೀಕಿಸಿದರು. ಅದು ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು ಎಂದರು.

ಪಾರದರ್ಶಕತೆಗೆ ತನ್ನ ಸರಕಾರದ ಬದ್ಧತೆಯನ್ನು, ನೇಮಕಾತಿ ಪ್ರಕ್ರಿಯೆಯನ್ನು ಕ್ರಮಬದ್ಧಗೊಳಿಸಲು ಮತ್ತು ಸಕಾಲಿಕ ನೇಮಕಾತಿಗಳನ್ನು ಖಚಿತಪಡಿಸಲು ಅದರ ಪ್ರಯತ್ನಗಳನ್ನು ಒತ್ತಿ ಹೇಳಿದ ಮೋದಿ, ಪ್ರತಿಭೆ ಮತ್ತು ಕಠಿಣ ಪರಿಶ್ರಮವನ್ನು ಆಧರಿಸಿ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಈ ಕ್ರಮಗಳು ಯುವಜನರಲ್ಲಿ ವಿಶ್ವಾಸವನ್ನು ಮೂಡಿಸಿವೆ ಎಂದರು.

ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್ ಯೋಜನೆ ಮತ್ತು ಗಣನೀಯ ಮೂಲಸೌಕರ್ಯ ಹೂಡಿಕೆಗಳಂತಹ ಸರಕಾರದ ಉಪಕ್ರಮಗಳ ಯಶಸ್ಸನ್ನು ಎತ್ತಿ ತೋರಿಸಿದ ಅವರು, ಈ ಉಪಕ್ರಮಗಳು ಉದ್ಯೋಗಾವಕಾಶಗಳನ್ನು ಗಮನಾರ್ಹವಾಗಿ ಹೆಚ್ಚಿಸಿವೆ ಎಂದು ಪ್ರತಿಪಾದಿಸಿದರು. ದೇಶದಲ್ಲಿ ಸ್ಥಾಪನೆಯಾಗಿರುವ 1.25 ಲಕ್ಷಕ್ಕೂ ಅಧಿಕ ಸ್ಟಾರ್ಟ್-ಅಪ್ ಗಳು ಸಣ್ಣ ನಗರಗಳಲ್ಲಿಯೂ ಉದ್ಯೋಗಾವಕಾಶಗಳನ್ನು ಸೃಷ್ಟಿಗೆ ಕೊಡುಗೆಯನ್ನು ನೀಡಿವೆ ಎಂದರು.

ರೈಲ್ವೆ ಕ್ಷೇತ್ರದ ಕುರಿತು ಮಾತನಾಡಿದ ಮೋದಿ, ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ ಸಾಮಾನ್ಯ ರೈಲುಗಳಿಗಾಗಿ ವಂದೇ ಭಾರತ ಮಾದರಿಯ 40,000 ಆಧುನಿಕ ಬೋಗಿಗಳ ತಯಾರಿಕೆ ಯೋಜನೆಯನ್ನು ಪ್ರಕಟಿಸಿದರು. ರೈಲ್ವೆ ಕ್ಷೇತ್ರವನ್ನು ಕಡೆಗಣಿಸಿದ್ದಕ್ಕಾಗಿ ಮತ್ತು ಜನಸಾಮಾನ್ಯರ ನಿರೀಕ್ಷೆಯನ್ನು ಪೂರೈಸುವಲ್ಲಿ ವೈಫಲ್ಯಕ್ಕಾಗಿ ಹಿಂದಿನ ಸರಕಾರಗಳನ್ನು ಅವರು ಟೀಕಿಸಿದರು.

ನವೀನತೆ ಮತ್ತು ಸಂಶೋಧನೆಗಳನ್ನು ಉತ್ತೇಜಿಸುವ ಪ್ರಯತ್ನವಾಗಿ ಸ್ಟಾರ್ಟ್-ಅಪ್ಗಳಿಗೆ ತೆರಿಗೆ ರಿಯಾಯಿತಿಗಳುಇ ಮತ್ತು ಒಂದು ಲಕ್ಷ ಕೋಟಿ ರೂ.ಗಳ ನಿಧಿಯನ್ನು ಉಲ್ಲೇಖಿಸಿದ ಮೋದಿ, ನೂತನ ಮಾರುಕಟ್ಟೆಗಳು,ಪ್ರವಾಸೋದ್ಯಮ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಸಂಪರ್ಕತೆಯ ಪರಿವರ್ತನೀಯ ಪರಿಣಾಮಕ್ಕೆ ಒತ್ತು ನೀಡಿದರು.

ಈ ಸಂದರ್ಭದಲ್ಲಿ ‘ಮಿಷನ್ ಕರ್ಮಯೋಗಿ’ಯ ವಿವಿಧ ಸ್ತಂಭಗಳ ನಡುವೆ ಸಹಭಾಗಿತ್ವ ಮತ್ತು ಸಮನ್ವಯವನ್ನು ಉತ್ತೇಜಿಸುವ ಏಕೀಕೃತ ಸಂಕೀರ್ಣ ‘ಕರ್ಮಯೋಗಿ ಭವನ’ಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News