ಬಿಜೆಪಿ ಸರಕಾರ ಶೇ.60ರಷ್ಟು ಭಾರತೀಯರ ಧ್ವನಿಯನ್ನಡಗಿಸಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ: ಸಂಸತ್ ಭದ್ರತಾ ವೈಫಲ್ಯಕ್ಕೆ ಬಿಜೆಪಿ ಸರಕಾರವು ಹೊಣೆಗಾರನಾಗಿದೆ ಎಂದು ಶುಕ್ರವಾರ ಇಲ್ಲಿ ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಸಂಸತ್ತಿನ ಉಭಯ ಸದನಗಳಿಂದ ಸುಮಾರು 150 ಸಂಸದರನ್ನು ಅಮಾನತುಗೊಳಿಸುವ ಮೂಲಕ ಸರಕಾರವು ಶೇ.60ಕ್ಕೂ ಅಧಿಕ ಭಾರತೀಯರ ಧ್ವನಿಯನ್ನು ಅಡಗಿಸಿದೆ ಎಂದು ಹೇಳಿದರು.
ಸಂಸದರ ಅಮಾನತಿನ ವಿರುದ್ಧ ಇಂಡಿಯಾ ಮೈತ್ರಿಕೂಟವು ಜಂತರ್ಮಂತರ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರಾಹುಲ್,ಇದು ದ್ವೇಷ ಮತ್ತು ಪ್ರೀತಿಯ ನಡುವಿನ ಹೋರಾಟವಾಗಿದೆ. ಬಿಜೆಪಿಯು ದ್ವೇಷವನ್ನು ಹರಡಿದಷ್ಟೂ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಹೆಚ್ಚೆಚ್ಚು ಪ್ರೀತಿ ಮತ್ತು ಭಾತೃತ್ವವನ್ನು ಹರಡುತ್ತಿವೆ ಎಂದು ಹೇಳಿದರು.
‘ಪ್ರತಿಭಟನಾಕಾರರು ನಿರುದ್ಯೋಗ ಸಮಸ್ಯೆಯನ್ನು ಬಿಂಬಿಸಲು ಸಂಸತ್ ಭದ್ರತೆಯನ್ನು ಉಲ್ಲಂಘಿಸಿದ್ದರು. ಅವರು ಹೇಗೆ ಒಳಗೆ ಪ್ರವೇಶಿಸಿದ್ದರು ಎನ್ನುವುದು ಮೊದಲ ಪ್ರಶ್ನೆಯಾಗಿದೆ. ಭದ್ರತೆ ಉಲ್ಲಂಘನೆಯಾಗಿದೆ. ಹೊಗೆ ಡಬ್ಬಿಯು ಒಳಗೆ ಬಂದಿದ್ದು ಹೇಗೆ? ಪ್ರತಿಭಟನಾಕಾರರು ನಿರುದ್ಯೋಗ ಸಮಸ್ಯೆಯನ್ನೆತ್ತಲು ಬಂದಿದ್ದರು. ನಮ್ಮ ದೇಶದಲ್ಲಿ ಯುವಜನರು ನಿರುದ್ಯೋಗಿಗಳಾಗಿದ್ದಾರೆ ’ ಎಂದು ಹೇಳಿದ ಅವರು, ನರೇಂದ್ರ ಮೋದಿ ಸರಕಾರದಡಿ ಯುವಜನರು ತಮ್ಮ ಫೋನ್ ಗಳನ್ನು ನೋಡುತ್ತ ಏಳೂವರೆ ಗಂಟೆಗಳನ್ನು ಕಳೆಯುತ್ತಿದ್ದಾರೆ ಎನ್ನುವುದು ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ ಎಂದರು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಿಪಿಎಂ ನಾಯಕ ಸೀತಾರಾಮ ಯೆಚೂರಿಯವರು, ಪ್ರಸ್ತುತ ಅಧಿಕಾರದಲ್ಲಿರುವವರಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಅಗತ್ಯವಿದೆ. ಸಂಸತ್ತಿನಲ್ಲಿ ಭದ್ರತಾ ವೈಫಲ್ಯಕ್ಕೆ ಬಿಜೆಪಿಯನ್ನು ಹೊಣೆಯಾಗಿಸಬೇಕಿದೆ ಎಂದರು.
‘ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದ್ದು ಇದು ಅತ್ಯಂತ ಘೋರವಾಗಿದೆ ಮತ್ತು ನಮ್ಮ ಪ್ರಜಾಪ್ರಭುತ್ವವು ಎದುರಿಸುತ್ತಿರುವ ಅಪಾಯಕಾರಿ ಸ್ಥಿತಿಯತ್ತ ಸಾರ್ವಜನಿಕರ ಗಮನವನ್ನು ಸೆಳೆಯುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ. ಇತಿಹಾಸದಲ್ಲೆಂದೂ 146 ಸಂಸದರನ್ನು ಅಮಾನತು ಮಾಡಿರಲಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಮತ್ತು ಪ್ರಜಾಪ್ರಭುತ್ವದ ತಾಯಿ ಎಂದು ತನ್ನನ್ನು ಕರೆದುಕೊಳ್ಳುವ ನಮ್ಮ ದೇಶಕ್ಕೆ ರಾಷ್ಟ್ರೀಯ ಅವಮಾನವಾಗಿದೆ ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದರೆ, ದೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಯಾವುದೇ ಬೆಲೆಯನ್ನು ತೆರಲು ಸಿದ್ಧರಿದ್ದೇವೆ ಎಂದು ಎನ್ಸಿಪಿ ನಾಯಕ ಶರದ ಪವಾರ್ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಐ ನಾಯಕ ಡಿ.ರಾಜಾ, ಡಿಎಂಕೆ ಸಂಸದ ತಿರುಚ್ಚಿ ಶಿವ ಸೇರಿದಂತೆ ವಿಪಕ್ಷಗಳ ಹಲವಾರು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಅಮಾನತನ್ನು ಖಂಡಿಸಿ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ದೇಶದ ಇತರ ಭಾಗಗಳಲ್ಲಿಯೂ ಪ್ರತಿಭಟನೆಗಳನ್ನು ನಡೆಸಿದವು.