ಬಿಜೆಪಿ ‘ಹೇರಿರುವ’ ನಿರುದ್ಯೋಗ’ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಪ್ರಮುಖ ವಿಷಯ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Update: 2024-04-07 16:00 GMT

ಮಲ್ಲಿಕಾರ್ಜುನ ಖರ್ಗೆ | PC : PTI 

ಹೊಸದಿಲ್ಲಿ: ಬಿಜೆಪಿ ‘ಹೇರಿರುವ’ ನಿರುದ್ಯೋಗವು ಲೋಕಸಭಾ ಚುನಾವಣೆಗಳಲ್ಲಿ ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ರವಿವಾರ ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಯುವಜನರು ಉದ್ಯೋಗಗಳನ್ನು ಹುಡುಕಲು ಪರದಾಡುತ್ತಿದ್ದಾರೆ ಮತ್ತು ದೇಶವು ‘ಜನಸಂಖ್ಯಾ ದುಃಸ್ವಪ್ನ’ದತ್ತ ನೋಡುತ್ತಿದೆ ಎಂದಿದ್ದಾರೆ.

‘ಯುವ ನ್ಯಾಯ’ದಡಿ ಕಾಂಗ್ರೆಸ್ ನ ‘ಪೆಹಲಿ ನೌಕರಿ ಪಕ್ಕಿ (ಮೊದಲ ನೌಕರಿ ಖಚಿತ)’ ಗ್ಯಾರಂಟಿಯು ಕೆಲಸ ಮತ್ತು ಕಲಿಕೆಯನ್ನು ಪ್ರತ್ಯೇಕಿಸುವ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ತನ್ಮೂಲಕ ವೃತ್ತಿಜೀವನ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದೂ ಖರ್ಗೆ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿಗಳು ಮತ್ತು ಐಐಎಂಗಳನ್ನು ಉಲ್ಲೇಖಿಸಿರುವ ಖರ್ಗೆ,‘12 ಐಐಟಿಗಳಲ್ಲಿ ಸುಮಾರು ಶೇ.30ರಷ್ಟು ವಿದ್ಯಾರ್ಥಿಗಳಿಗೆ ನಿಯಮಿತ ನೇಮಕಾತಿಗಳು ದೊರೆಯುತ್ತಿಲ್ಲ. 21 ಐಐಎಂಗಳಪೈಕಿ ಕೇವಲ ಶೇ.20ರಷ್ಟು ಸಂಸ್ಥೆಗಳಿಗೆ ಮಾತ್ರ ಈವರೆಗೆ ತಮ್ಮ ಬೇಸಿಗೆ ನೇಮಕಾತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ. ಐಐಟಿ ಮತ್ತು ಐಐಎಂಗಳ ಸ್ಥಿತಿಯೇ ಹೀಗಿರುವಾಗ ಬಿಜೆಪಿಯು ದೇಶಾದ್ಯಂತ ನಮ್ಮ ಯುವಜನರ ಭವಿಷ್ಯವನ್ನು ಹೇಗೆ ಹಾಳುಗೆಡವಿದೆ ಎನ್ನುವುದನ್ನು ಯಾರೂ ಊಹಿಸಬಹುದು. 2014ರಿಂದ ಮೋದಿ ಸರಕಾರದಡಿ ಯುವಜನರ ನಿರುದ್ಯೋಗ ದರವು ಮೂರು ಪಟ್ಟು ಹೆಚ್ಚಾಗಿದೆ ’ ಎಂದು ಹೇಳಿದ್ದಾರೆ.

‘‘ಎರಡು ಕೋಟಿ ಉದ್ಯೋಗಗಳನ್ನು ಒದಗಿಸುವ ಮೋದಿಯವರ ಗ್ಯಾರಂಟಿಯು ನಮ್ಮ ಯುವಜನರ ಹೃದಯಗಳು ಮತ್ತು ಮನಸ್ಸುಗಳನ್ನು ದುಃಸ್ವಪ್ನವಾಗಿ ಕಾಡುತ್ತಿದೆ. ಇದೇ ಕಾರಣದಿಂದ ಕಾಂಗ್ರೆಸ್ ಪಕ್ಷವು ‘ಯುವ ನ್ಯಾಯ’ದಡಿ ‘ಪೆಹಲಿ ನೌಕರಿ ಪಕ್ಕಿ’ ಗ್ಯಾರಂಟಿಯನ್ನು ಘೋಷಿಸಿದೆ ಎಂದಿರುವ ಖರ್ಗೆ,ಈಗ 25 ವರ್ಷಕ್ಕಿಂತ ಕೆಳಗಿನ ಯಾವುದೇ ಡಿಪ್ಲೋಮಾ ಅಥವಾ ಪದವಿಯನ್ನು ಹೊಂದಿರುವವರು ಉದ್ಯೋಗವನ್ನು ಕೋರುವ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾರೆ ಮತ್ತು ಅವರಿಗೆ ವರ್ಷಕ್ಕೆ ಕನಿಷ್ಠ ಒಂದು ಲ.ರೂ.ಗಳನ್ನು ನೀಡಲಾಗುವುದು ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News