ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತಪ್ಪು ನಿರೂಪಣೆ ಹರಡುತ್ತಿದೆ: ಸಂಜಯ್ ರಾವತ್
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಶಕ್ತಿ’ ಹೇಳಿಕೆ ಕುರಿತಂತೆ ಅವರನ್ನು ಗುರಿಯಾಗಿರಿಸಿ ಬಿಜೆಪಿ ತಪ್ಪು ನಿರೂಪಣೆ ಹರಡುತ್ತಿದೆ ಎಂದು ಶಿವಸೇನೆ (ಯುಬಿಟಿ)ಯ ಸಂಜಯ್ ರಾವತ್ ಅವರು ರವಿವಾರ ಹೇಳಿದ್ದಾರೆ.
ತನ್ನ ಮುಂಬೈ ರ‍್ಯಾಲಿಯ ಸಂದರ್ಭ ಪಕ್ಷದ ಮುಖವಾಣಿ ‘ಸಾಮ್ನಾ’ದ ವಾರದ ಕಾಲಂ ‘‘ರೋಕ್ ಟೋಕ್’’ನಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಖವಾಡ. ಅದರ ಹಿಂದಿನ ‘ಶಕ್ತಿ’ಯ ವಿರುದ್ಧ ಪ್ರತಿಪಕ್ಷಗಳು ಹೋರಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು.
ರಾಹುಲ್ ಗಾಂಧಿ ಅವರು ‘ಧನ ಶಕ್ತಿ’ (ಹಣ ಬಲ)ಯ ವಿರುದ್ಧ ಪ್ರತಿಕ್ಷಗಳು ಹೋರಾಡಬೇಕು ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಇದು ಹಿಂದುತ್ವ ಹಾಗೂ ಮಹಿಳಾ ಶಕ್ತಿಯ ಮೇಲಿನ ದಾಳಿ ಎಂದು ಹೇಳಿದ್ದರು.
ತಮ್ಮನ್ನು ವಿಷ್ಣುವಿನ ಅವತಾರ ಎಂದು ಪರಿಗಣಿಸುವ ಜನರು ರಾಹುಲ್ ಗಾಂಧಿ ಅವರ ‘ಶಕ್ತಿ’ ವಾಗ್ದಾಳಿಯಿಂದ ಆಘಾತಕ್ಕೆ ಒಳಗಾದರು. ಅವರ ವಿರುದ್ಧ ಸುಳ್ಳು ನಿರೂಪಣೆಗಳನ್ನು ಹರಡಲು ಆರಂಭಿಸಿದರು. ಈ ತಪ್ಪು ಪ್ರಚಾರದ ಹಿಂದೆ ಕೂಡ ‘ಶಕ್ತಿ’ ಇದೆ ಎಂದು ಸಂಜಯ್ ರಾವತ್ ಹೇಳಿದರು.
ಬಿಜೆಪಿ ಮಾನಸಿಕ ರೋಗಿಯಾಗುತ್ತಿದೆ ಎಂದು ಅವರು ಆರೋಪಿಸಿದರು. ರೋಗಿಗಳಿಂದ ಆದಾಯ ಗಳಿಸುವ ಆಸ್ಪತ್ರೆ ಚುನಾವಣಾ ಬಾಂಡ್ ಗಳನ್ನು ಎಕೆ ಖರೀದಿಸಬೇಕು ಎಂದು ಅವರು ಪ್ರಶ್ನಿಸಿದರು.
‘‘ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 2021 ಅಕ್ಟೋಬರ್ನಿಂದ 2023 ಅಕ್ಟೋಬರ್ ವರೆಗೆ 162 ಕೋ.ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭ ಯಾವ ಪಕ್ಷ ಆಸ್ಪತ್ರೆಯಿಂದ ಚುನಾವಣಾ ಬಾಂಡ್ ಗಳನ್ನು ಸ್ವೀಕರಿಸಲು ಸಾಧ್ಯ ? ಜಂಬೋ ಕೋವಿಡ್ ಸೆಂಟರ್ ಹಾಗೂ ಕಿಚಿಡಿ ಪ್ರಕರಣಗಳ ತನಿಖೆಯಲ್ಲಿ ಪಾಲ್ಗೊಂಡ ತನಿಖಾ ಸಂಸ್ಥೆಗಳು ಈ ಆಸ್ಪತ್ರೆ ಹಾಗೂ ಬಿಜೆಪಿ ನಡುವಿನ ನಂಟನ್ನು ತನಿಖೆ ನಡೆಸಬೇಕು’’ ಎಂದು ಅವರು ಹೇಳಿದ್ದಾರೆ.