ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದ ಬಿಜೆಪಿ ನಾಯಕನಿಗೆ ಉನ್ನತ ಹುದ್ದೆ

Update: 2023-11-18 05:32 GMT

ಬಿಜೆಪಿ ನಾಯಕ ಪೂರ್ಣೇಶ್ ಮೋದಿ (NDTV)

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ್ದ ಮೋದಿ ಉಪನಾಮದ ಕುರಿತ ಹೇಳಿಕೆಯ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಅವರಿಗೆ ಪ್ರಮುಖ ಹುದ್ದೆಯೊಂದನ್ನು ನೀಡಲಾಗಿದ್ದು, ಅವರನ್ನು ದಾದ್ರಾ ನಗರ್ ಹವೇಲಿ ಮತ್ತು ದಾಮನ್ ದಿಯುವಿನ ರಾಜಕೀಯ ವ್ಯವಹಾರಗಳ ಉಸ್ತುವಾರಿಯನ್ನಾಗಿ ಶುಕ್ರವಾರ ನೇಮಿಸಲಾಗಿದೆ.

ಈ ಕುರಿತು ಅಧಿಸೂಚನೆ ಹೊರಡಿಸಿರುವ ಬಿಜೆಪಿ, "ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪೂರ್ಣೇಶ್ ಮೋದಿಯನ್ನು ದಾದ್ರಾ ನಗರ್ ಹವೇಲಿ ಮತ್ತು ದಾಮನ್ ದಿಯುವಿನ ಉಸ್ತುವಾರಿ ಹಾಗೂ ದುಶ್ಯಂತ್ ಪಟೇಲ್ ಅವರನ್ನು ಸಹ ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ" ಎಂದು ಪ್ರಕಟಿಸಿದೆ.

ಸೂರತ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾದ ಪೂರ್ಣೇಶ್ ಮೋದಿ, ರಾಜ್ಯದ ಕೋಲಾರದಲ್ಲಿ 2019ರಲ್ಲಿ ನಡೆದಿದ್ದ ಸಮಾವೇಶವೊಂದರಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ಅಪರಾಧಿ ಎಂದು ಘೋಷಿಸಿ, ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಿಗೇ ವಯನಾಡ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದಾಗಿತ್ತು.

ಇದಕ್ಕೆ ಸು‍ಪ್ರೀಂ ಕೋರ್ಟ್ ತಡೆ ನೀಡಿತ್ತು. ಬಳಿಕ ಲೋಕಸಭಾ ಸಚಿವಾಲಯವು ರಾಹುಲ್‌ ಅವರ ಸಂಸತ್‌ ಸದಸ್ಯತ್ವವನ್ನು ಪುನರ್‌ ಸ್ಥಾಪಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News