ಉದಯಪುರ ಟೈಲರ್ ಕೊಲೆಗಾರರಿಗೆ ಬಿಜೆಪಿ ಸಂಪರ್ಕವಿದೆ: ಅಶೋಕ್ ಗೆಹ್ಲೋಟ್ ಗಂಭೀರ ಆರೋಪ
ಜೋಧ್‌ಪುರ (ರಾಜಸ್ಥಾನ): ಉದಯಪುರ್ ಟೈಲರ್ ಕನ್ಹಯ್ಯ ಲಾಲ್ ಕೊಲೆಗಾರರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದು, ನ.25ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಕೇಸರಿ ಪಾಳಯ ಪ್ರಯತ್ನಿಸಿತ್ತು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದಾರೆ ಎಂದು
ರವಿವಾರ ಜೋಧ್‌ಪುರದಲ್ಲಿನ ಚುನಾವಣಾ ಅಭಿಯಾನಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡದ ಬದಲು ರಾಜಸ್ಥಾನ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆ ಗುಂಪು (SOG) ನಡೆಸಿದ್ದಿದ್ದರೆ, ಪ್ರಕರಣವು ತಾರ್ಕಿಕ ಅಂತ್ಯ ತಲುಪಿರುತ್ತಿತ್ತು ಎಂದು ಪ್ರತಿಪಾದಿಸಿದ್ದಾರೆ.
ಬಿಜೆಪಿ ನಾಯಕಿ ನೂಪುರ್ ಶರ್ಮ ಪರ ಪೋಸ್ಟ್ ಮಾಡಿದ್ದರು ಎಂಬ ಕಾರಣಕ್ಕೆ ಕಳೆದ ವರ್ಷ ಜೂ.28ರಂದು ಉದಯ್ ಪುರದಲ್ಲಿ ಇಬ್ಬರು ಹಂತಕರು ಕನ್ಹಯ್ಯ ಲಾಲ್ ಎಂಬ ಟೈಲರ್ ನನ್ನು ಆತನ ಅಂಗಡಿಯಲ್ಲೇ ಶಿರಶ್ಛೇದಗೊಳಿಸಿ ಹತ್ಯೆಗೈದಿದ್ದರು.
ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ನೂಪುರ್ ಶರ್ಮರನ್ನು ಬಿಜೆಪಿಯಿಂದ ಅಮಾನತುಗೊಳಿಸಿದ ಬೆನ್ನಿಗೇ ಈ ಘಟನೆ ನಡೆದಿತ್ತು.
ಉದಯ್ ಪುರ ಟೈಲರ್ ಶಿರಶ್ಛೇದ ಘಟನೆಯು ಇಡೀ ದೇಶಾದ್ಯಂತ ಆಘಾತ ಉಂಟುಮಾಡಿತ್ತು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು.
ಆರಂಭದಲ್ಲಿ ಈ ಪ್ರಕರಣವು ಉದಯ್ ಪುರದಲ್ಲಿನ ಧನ್ ಮಂಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತಾದರೂ, ಜೂನ್ 29, 2022ರಂದು ರಾಷ್ಟ್ರೀಯ ತನಿಖಾ ದಳವು ಈ ಕುರಿತು ಮರು ಪ್ರಕರಣ ದಾಖಲಿಸಿಕೊಂಡಿತ್ತು.
“ರಾಷ್ಟ್ರೀಯ ತನಿಖಾ ದಳವು ಈ ಪ್ರಕರಣದ ಸಂಬಂಧ ಯಾವ ಕ್ರಮ ತೆಗೆದುಕೊಂಡಿದೆ ಎಂಬುದು ಯಾರಿಗೂ ತಿಳಿದಿಲ್ಲ. ಒಂದು ವೇಳೆ ನಮ್ಮ ವಿಶೇಷ ಕಾರ್ಯಾಚರಣೆ ಗುಂಪು ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದರೆ, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಿದ್ದೆವು” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಈ ಬರ್ಬರ ಹತ್ಯೆಯು ಜೂ.28ರಂದು ಉದಯ್ ಪುರದ ಮಾಲ್ಡಾಸ್ ಪ್ರದೇಶದಲ್ಲಿ ನಡೆದಿತ್ತು.