ಟಿಎಂಸಿ ವಿರುದ್ಧದ ಜಾಹೀರಾತುಗಳಿಗೆ ತಡೆ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಬಿಜೆಪಿ
Update: 2024-05-24 09:58 GMT
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಆಡಳಿತ ತೃಣಮೂಲ ಕಾಂಗ್ರೆಸ್ ಪಕ್ಷದ ಕುರಿತಂತೆ ನಿಂದನಾತ್ಮಕ ಹಾಗೂ ಮಾದರಿ ನೀತಿ ಸಂಹಿತೆಗೆ ವಿರುದ್ಧವಾದ ಜಾಹೀರಾತುಗಳನ್ನು ಮುದ್ರಿಸುವುದಕ್ಕೆ ತಡೆ ಹೇರಿ ಕೊಲ್ಕತ್ತಾ ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ಬಿಜೆಪಿ ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕೆಂದು ಪಕ್ಷದ ಪರ ವಕೀಲರು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರ ಪೀಠದ ಮುಂದೆ ಕೋರಿಕೊಂಡರು.
ಆದರೆ ಈ ಪ್ರಕರಣದ ವಿಚಾರಣೆಯನ್ನು ಇಂದೇ ಕೈಗೆತ್ತಿಕೊಳ್ಳಲು ನ್ಯಾಯಪೀಠ ನಿರಾಕರಿಸಿದೆ. ಮುಂದಿನ ರಜಾಕಾಲದ ಪೀಠಕ್ಕೆ ನೀವೇಕೆ ಕೋರಬಾರದು?” ಎಂದು ನ್ಯಾಯಮೂರ್ತಿ ಬೇಲಾ ತ್ರಿವೇದಿ ಹೇಳಿದರೂ ವಕೀಲರು ಪಟ್ಟು ಬಿಡದೇ ಇದ್ದಾಗ “ನೋಡೋಣ” ಎಂದಷ್ಟೇ ನ್ಯಾಯಮೂರ್ತಿಗಳು ಹೇಳಿದರು.