ನನಗೆ ಮತ ನೀಡಿಲ್ಲ, ಇನ್ನು ನಿಮ್ಮ ದಿನಗಳು ಉತ್ತಮವಾಗಿರಲು ಸಾಧ್ಯವಿಲ್ಲ: ಮತದಾರರಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದನ ವಿಡಿಯೋ ವೈರಲ್

Update: 2024-06-21 14:08 IST
ನನಗೆ ಮತ ನೀಡಿಲ್ಲ, ಇನ್ನು ನಿಮ್ಮ ದಿನಗಳು ಉತ್ತಮವಾಗಿರಲು ಸಾಧ್ಯವಿಲ್ಲ: ಮತದಾರರಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದನ ವಿಡಿಯೋ ವೈರಲ್

Screengrab:X/@IndianExpress

  • whatsapp icon

ಹೊಸದಿಲ್ಲಿ: ಯಾದವರು ಮತ್ತು ಮುಸ್ಲಿಮರಿಗೆ ಕೆಲಸ ಮಾಡುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ ಬೆನ್ನಿಗೇ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನೂತನ ಸಂಸದ ಬಿಷ್ಣು ಪಡ ರೇ ಕೂಡಾ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ.

ನನಗೆ ಮತ ನೀಡದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಿಕೋಬಾರ್ ಮತದಾರರಿಗೆ ಬಿಷ್ಣು ಪಡ ರೇ ಬೆದರಿಕೆ ಒಡ್ಡಿರುವ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮಾರನೆಯ ದಿನವಾದ ಜೂನ್ 5ರಂದು ಈ ವಿಡಿಯೊ ಬೆಳಕಿಗೆ ಬಂದಿದ್ದರೂ, ಇತ್ತೀಚೆಗೆ ರೇ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಈ ವಿಡಿಯೊ ವೈರಲ್ ಆಗಿದೆ.

“ನಾವು ಜನರ ಕೆಲಸ ಆಗುವಂತೆ ಮಾಡಿದ್ದೇವೆ. ಆದರೆ, ನಮಗೆ ಮತ ನೀಡದವರು ಒಮ್ಮೆ ಯೋಚಿಸಬೇಕಿದೆ. ನಿಕೋಬಾರ್ ದ್ವೀಪವು ನನಗೆ ಯಾವುದೇ ಮತ ನೀಡಿಲ್ಲ. ಈಗ ನಿಮಗೇನಾಗಲಿದೆ ಎಂಬುದನ್ನು ಯೋಚಿಸಿ” ಎಂದು ಆ ವಿಡಿಯೊದಲ್ಲಿ ರೇ ಬೆದರಿಕೆ ಒಡ್ಡಿದ್ದಾರೆ ಎಂದು indianexpress.com ವರದಿ ಮಾಡಿದೆ.

“ನಿಕೋಬಾರ್ ಹೆಸರಲ್ಲಿ ನೀವು ಹಣ ತೆಗೆದುಕೊಳ್ಳುತ್ತೀರಿ, ಮದ್ಯ ಕುಡಿಯುತ್ತೀರಿ, ಆದರೆ ಮತ ನೀಡುವುದಿಲ್ಲ. ಎಚ್ಚರವಾಗಿರಿ, ಎಚ್ಚರವಾಗಿರಿ, ಎಚ್ಚರವಾಗಿರಿ, ಈಗ ನಿಮ್ಮ ದಿನಗಳ ಕೆಟ್ಟದಾಗಿವೆ. ನೀವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪವನ್ನು ಇನ್ನು ಮುಂದೆ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ನಿಮ್ಮ ದಿನಗಳು ಇನ್ನು ಉತ್ತಮವಾಗಿರಲು ಸಾಧ್ಯವಿಲ್ಲ” ಎಂದೂ ಅವರು ಎಚ್ಚರಿಸಿದ್ದಾರೆ.

ಆದರೆ, ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೆ, ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ರೇ, “ಪೋರ್ಟ್ ಬ್ಲೇರ್ ನಲ್ಲಿ ನನ್ನನ್ನು ಭೇಟಿ ಮಾಡಿದ ಕಾರ್ ನಿಕೋಬಾರ್ ನ ಬುಡಕಟ್ಟು ಮುಖ್ಯ ನಾಯಕನ ನೇತೃತ್ವದ ನಿಕೋಬಾರ್ ಹಿರಿಯರು, ನನ್ನ ಗೆಲುವಿಗೆ ಅಭಿನಂದಿಸಿದರು. ಕೆಲವು ಬೆಳವಣಿಗೆಗಳಿಂದ ಸಮುದಾಯದ ಒಂದು ವರ್ಗಕ್ಕೆ ಆಗಿರುವ ನೋವು ಮತ್ತು ಕಳವಳದ ಕುರಿತು ನನಗೆ ಮಾಹಿತಿ ನೀಡಿದರು. ಚುನಾಯಿತ ಸಂಸದನಾದ ನಾನು, ನಿಕೋಬಾರ್ ಜನರ ಬಗೆಗಿನ ನನ್ನ ಆಳವಾದ ಪ್ರೀತಿಯ ಕುರಿತು ತಿಳಿಸಿದೆ ಹಾಗೂ ಕಳೆದ ಅವಧಿಯಲ್ಲಿ ಇಲ್ಲಿನ ಸಮುದಾಯಕ್ಕಾಗಿ ಮಾಡಿರುವ ಕೆಲಸಗಳ ಕುರಿತು ಹೇಳಿದೆ. ಇದರೊಂದಿಗೆ ನಿಕೋಬಾರ್ ನ ಹಿರಿಯರಿಗೆ ಹಳೆಯದನ್ನು ಮರೆತು, ಸಮುದಾಯಕ್ಕೆ ಅಗತ್ಯವಿದ್ದಾಗಲೆಲ್ಲ ಮತ್ತಷ್ಟು ಬದ್ಧತೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದೆ” ಎಂದು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News