ಮುಂದಿನ ಪಕ್ಷಾಧ್ಯಕ್ಷ ಮತ್ತು ಬಾಂಗ್ಲಾದೇಶಿ ಹಿಂದೂಗಳ ಭವಿಷ್ಯ ಕುರಿತು ಬಿಜೆಪಿ-ಆರೆಸ್ಸೆಸ್ ನಡುವೆ ತಿಕ್ಕಾಟ: ವರದಿ

Update: 2024-08-13 10:44 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಈ ತಿಂಗಳ ಅಂತ್ಯದಲ್ಲಿ ಕೇರಳದ ಪಾಲಕ್ಕಾಡ್‌ನಲ್ಲಿ ನಡೆಯಲಿರುವ ಸಂಘಪರಿವಾರ ಸಂಘಟನೆಗಳ ಔಪಚಾರಿಕ ‘ಸಮನ್ವಯ’ಸಭೆಗೆ ಮುನ್ನ ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ಹಗ್ಗಜಗ್ಗಾಟದಿಂದಾಗಿ ಪಕ್ಷದ ಮುಂದಿನ ಅಧ್ಯಕ್ಷ ಯಾರಾಗಲಿದ್ದಾರೆ ಮತ್ತು ಈ ಹುದ್ದೆಗೆ ಚುನಾವಣೆಗೆ ಸಮಯ ನಿಗದಿ ಇನ್ನೂ ಅನಿಶ್ಚಿತವಾಗಿದೆ ಎಂದು thehindu.com ವರದಿ ಮಾಡಿದೆ.

ರವಿವಾರ ಸಂಜೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ನಿವಾಸದಲ್ಲಿ ಐದು ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ,ಆರೋಗ್ಯ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಹಿರಿಯ ಆರೆಸ್ಸೆಸ್ ನಾಯಕ ದತ್ತಾತ್ರೇಯ ಹೊಸಬಾಳೆ ಮತ್ತು ಅದರ ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಅವರೂ ಉಪಸ್ಥಿತರಿದ್ದರು.

ಉನ್ನತ ಮೂಲಗಳ ಪ್ರಕಾರ ಸಭೆಯಲ್ಲಿ ಬಿಜೆಪಿಯ ಮುಂದಿನ ಅಧ್ಯಕ್ಷರು ಯಾರಾಗಬೇಕು ಎನ್ನುವುದರ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಸುರಕ್ಷತೆ ಕುರಿತು ಚರ್ಚಿಸಲಾಗಿದೆ.

ಮುಂದಿನ ಬಿಜೆಪಿ ಅಧ್ಯಕ್ಷರ ಕುರಿತು ಎರಡು ಚಿಂತನೆಗಳಿವೆ. ಹುದ್ದೆಗೆ ಅಂತಿಮವಾಗಿ ಏಕೈಕ ಅಭ್ಯರ್ಥಿಯಾಗಲಿರುವ ಕಾರ್ಯಾಧ್ಯಕ್ಷರನ್ನು ಶೀಘ್ರ ಹೆಸರಿಸಬೇಕು ಎನ್ನುವುದು ಒಂದು ಚಿಂತನೆಯಾಗಿದ್ದರೆ, ಮಹಾರಾಷ್ಟ್ರ, ಹರ್ಯಾಣ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳು ಮುಗಿದ ಬಳಿಕವೇ ಹೊಸ ಕಾರ್ಯಾಧ್ಯಕ್ಷರ ಹೆಸರನ್ನು ಪ್ರಕಟಿಸಬೇಕು ಎನ್ನುವುದು ಇನ್ನೊಂದು ಚಿಂತನೆಯಾಗಿದೆ ಎಂದು ಮೂಲಗಳು ತಿಳಿಸಿದವು. ಸಭೆಯಲ್ಲಿ ಯಾರು ಮೇಲುಗೈ ಸಾಧಿಸಿದರು ಎನ್ನುವುದು ಸ್ಪಷ್ಟವಾಗಿಲ್ಲ ಎಂದು thehindu.com ವರದಿ ಮಾಡಿದೆ.

ಬಿಜೆಪಿಯು ಕಾಲಹರಣ ಮಾಡುತ್ತಿದ್ದರೆ ಅತ್ತ ಆರೆಸ್ಸೆಸ್ ಈ ಹಿಂದಿಗಿಂತ ಭಿನ್ನವಾಗಿ ತನ್ನೊಂದಿಗೆ ಸಮಾಲೋಚನೆಯ ಬಳಿಕವೇ ಪಕ್ಷದ ಮುಂದಿನ ಅಧ್ಯಕ್ಷರನ್ನು ಆಯ್ಕ ಮಾಡಬೇಕು ಎಂಬ ಸ್ಪಷ್ಟ ನಿಲುವನ್ನು ಹೊಂದಿದೆ.

ಸಂಘಟನೆಯನ್ನು ನಿಭಾಯಿಸಲು ಹೆಚ್ಚಿನ ಸಾಮರ್ಥ್ಯ ಉಳ್ಳವರು ಪಕ್ಷಾಧ್ಯಕ್ಷರಾಗಬೇಕು ಎನ್ನುವುದನ್ನು ಲೋಕಸಭಾ ಫಲಿತಾಂಶಗಳು ಆರೆಸ್ಸೆಸ್‌ಗೆ ಮನವರಿಕೆ ಮಾಡಿದ್ದರೆ, ತನ್ನ ಮತ್ತು ಅಧ್ಯಕ್ಷರ ನಡುವೆ ಮೊದಲಿನಂತೆ ಸಮನ್ವಯವಿರಬೇಕು ಎಂದು ಬಿಜೆಪಿ ಹೈಕಮಾಂಡ್ ಬಯಸಿದೆ ಎಂದು ಮೂಲಗಳು ತಿಳಿಸಿದವು.

ಬಾಂಗ್ಲಾದೇಶದಲ್ಲಿಯ ಹಿಂದುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸರಕಾರವು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಪರಿಸ್ಥಿತಿಯ ಮೇಲ್ವಿಚಾರಣೆಗಾಗಿ ಸಮಿತಿಯೊಂದನ್ನು ರಚಿಸಿದೆ. ತಾವು ಬಾಂಗ್ಲಾದೇಶದಿಂದ ನಿರಾಶ್ರಿತರ ಆಗಮನವನ್ನು ಬಯಸುವುದಿಲ್ಲ ಎಂದು ಈಶಾನ್ಯ ಭಾರತದ ಹಲವಾರು ರಾಜ್ಯಗಳು ದೃಢವಾಗಿ ಹೇಳಿವೆ.

ಬಾಂಗ್ಲಾದೇಶದಲ್ಲಿಯ ಅಲ್ಪಸಂಖ್ಯಾತ ಹಿಂದುಗಳು ಅಲ್ಲಿಯ ಪ್ರಜೆಗಳಾಗಿರುವುದರಿಂದ ಆ ದೇಶದ ಸರಕಾರವೇ ಅವರಿಗೆ ರಕ್ಷಣೆ ನೀಡಬೇಕಿದೆ ಎಂದು ಸರಕಾರದಲ್ಲಿಯ ಮೂಲವೊಂದು ತಿಳಿಸಿದೆ.

‘ಸಮನ್ವಯ’ಕ್ಕಾಗಿ ಆರೆಸ್ಸೆಸ್ ಆಗಾಗ್ಗೆ ಸಭೆಗಳು ನಡೆಸುತ್ತಿರುವುದು ಹಿಂದಿಗಿಂತ ಭಿನ್ನವಾಗಿ ಬಿಜೆಪಿಯನ್ನು ನಡೆಸುವಲ್ಲಿ ಸಕ್ರಿಯ ಪಾತ್ರವನ್ನು ಬಯಸಿದೆ ಎನ್ನುವುದಕ್ಕೆ ಬಲವಾದ ಸಂಕೇತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News