ಜಾರ್ಖಂಡ್: ತನ್ನ ಕಚೇರಿ ಸಿಬ್ಬಂದಿಗಳಿಗೆ ಸಫಾರಿ ಸೂಟ್ಅನ್ನು ವಸ್ತ್ರ ಸಂಹಿತೆಯನ್ನಾಗಿ ಮಾಡಿದ ಬಿಜೆಪಿ

Update: 2023-09-14 08:26 GMT

Photo credit: newindianexpress.com

ರಾಂಚಿ: ತನ್ನ ಪಕ್ಷದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಜಾರ್ಖಂಡ್ ಬಿಜೆಪಿ ಘಟಕವು ಮೊದಲ ಬಾರಿಗೆ ಸಮವಸ್ತ್ರ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಪುರುಷ ನೌಕರರು ನೀಲಿ ಸಫಾರಿ ಸೂಟ್ ಗಳನ್ನು ಧರಿಸಲಿದ್ದರೆ, ಮಹಿಳಾ ನೌಕರರು ನೀಲಿ ಬಣ್ಣದ ಸೀರೆಯನ್ನು ಉಡಲಿದ್ದಾರೆ. ಬಿಜೆಪಿ ಕಚೇರಿಗೆ ಭೇಟಿ ನೀಡುವ ಸಂದರ್ಶಕರನ್ನು ‘ನಮಸ್ತೆ’ ಎಂದು ಹೇಳುವ ಮೂಲಕ ಸ್ವಾಗತಿಸಲಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಇಡೀ ದೇಶದಲ್ಲಿ ತನ್ನ ಪಕ್ಷದ ಕಚೇರಿಯ ಸಿಬ್ಬಂದಿಗಳಿಗೆ ಸಮವಸ್ತ್ರವನ್ನು ಜಾರಿಗೊಳಿಸುತ್ತಿರುವ ಪ್ರಥಮ ರಾಜ್ಯ ಜಾರ್ಖಂಡ್ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದಾರೆ. ಈ ಸಮವಸ್ತ್ರಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಪರಿಚಯಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಿಜೆಪಿ ನಾಯಕತ್ವವು ಬಿಜೆಪಿ ಕಚೇರಿಗಳಿಗೆ ಭೇಟಿ ನೀಡುವ ಜನಗಳ ಮೇಲೆ ಧನಾತ್ಮಕ ಪರಿಣಾಮ ಬೀರಿ, ಸಭ್ಯತೆಯೊಂದಿಗೆ ಕಾಣುವಂತೆ ಮಾಡಲು ತಮ್ಮ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಮವಸ್ತ್ರ ಜಾರಿಗೊಳಿಸುವುದರ ಕುರಿತು ನಿರ್ಧರಿಸಬೇಕು ಎಂದು ಸೂಚನೆ ನೀಡಿದ ನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಅವರು ಸಮವಸ್ತ್ರಕ್ಕೆ ಯಾವುದೇ ಬಣ್ಣವನ್ನು ಇನ್ನೂ ಸಲಹೆ ಮಾಡಿಲ್ಲ.

“ಬಿಜೆಪಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಇನ್ನು ಮುಂದೆ ಸಫಾರಿ ಸೂಟ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಕಾಲರ್ ಹಾಗೂ ಪಾಕೆಟ್ ಗಳ ಮೇಲೆ ಕೇಸರಿ ಗೆರೆಗಳು ಇರಲಿವೆ. ಅವರು ತಮ್ಮ ಕುತ್ತಿಗೆಗೆ ಗುರುತಿನ ಚೀಟಿಯನ್ನೂ ನೇತು ಹಾಕಿಕೊಳ್ಳಲಿದ್ದಾರೆ” ಎಂದು ಬಿಜೆಪಿ ಕಚೇರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದೇ ರೀತಿ ಮಹಿಳಾ ಸಿಬ್ಬಂದಿಗಳು ಅದೇ ಬಣ್ಣದ ಸೀರೆಗಳನ್ನು ಧರಿಸಲಿದ್ದಾರೆ ಎಂದೂ ಪದಾಧಿಕಾರಿಯೊಬ್ಬರು ಹೇಳಿದ್ದಾರೆ. “ಪ್ರತಿ ಸಿಬ್ಬಂದಿಗೂ ತಮ್ಮ ಸಮವಸ್ತ್ರಗಳನ್ನು ಅಚ್ಚುಕಟ್ಟಾಗಿ ಮತ್ತು ಶುಚಿಯಾಗಿ ಇಟ್ಟುಕೊಳ್ಳುವಂತೆ ಸಾಧ್ಯವಾಗಲು ಎರಡು ಜೊತೆ ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ಶರ್ಟಿನ ಪಾಕೆಟ್ ಮೇಲೆ ಬಿಜೆಪಿ ಎಂಬ ಅಕ್ಷರಗಳನ್ನು ಕೇಸರಿ ಬಣ್ಣದಲ್ಲಿ ಉಬ್ಬಿದ ರೀತಿಯಲ್ಲಿ ಮುದ್ರಿಸಲಾಗಿರುತ್ತದೆ. ರಾಂಚಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ 25 ಮಂದಿ ಸಿಬ್ಬಂದಿಗಳಿಗೆ ಈಗಾಗಲೇ ಸಮವಸ್ತ್ರಗಳನ್ನು ಹಸ್ತಾಂತರಿಸಲಾಗಿದ್ದು, ಈ ಸಮವಸ್ತ್ರಗಳನ್ನು ಸೆಪ್ಟೆಂಬರ್ 17ರಂದು ಪರಿಚಯಿಸುವ ಸಾಧ್ಯತೆ ಇದೆ ಎಂದು ಪಕ್ಷದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News