ಉತ್ತರ ಪ್ರದೇಶ | ಬಿಜೆಪಿ ಕಾರ್ಯಕರ್ತನ 16ರ ವಯಸ್ಸಿನ ಪುತ್ರನಿಂದ 8 ಬಾರಿ ಮತ ಚಲಾವಣೆ!

Update: 2024-05-19 16:35 GMT

photo: @yadavakhilesh/X

ಲಕ್ನೊ : ಉತ್ತರಪ್ರದೇಶದ ಫರೂಖಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಾಲಕನೋರ್ವ ಬಿಜೆಪಿಗೆ 8 ಬಾರಿ ಮತ ಹಾಕುವುದನ್ನು ತೋರಿಸುವ ವೀಡಿಯೊ ವೈರಲ್ ಆದ ಬಳಿಕ ಪ್ರತಿಪಕ್ಷ ರವಿವಾರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿವೆ.

ಬಾಲಕ ನಿರಂತರ ಹಲವು ಬಾರಿ ಮತ ಚಲಾಯಿಸುತ್ತಿರುವಾಗ ತನ್ನನ್ನು ತಾನು ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದು, ಆ ವೀಡಿಯೊವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಾಮಾಜಿಕ ಮಾಧ್ಯಮದ ವೇದಿಕೆ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೊ ಉತ್ತರಪ್ರದೇಶದ ಇಟಾಹ್ ಜಿಲ್ಲೆಯ ಖಿರಿ ಪಮರಾನ್ ಗ್ರಾಮದಲ್ಲಿ ರೆಕಾರ್ಡ್ ಆಗಿದೆ. ಈ ಗ್ರಾಮ ಫರೂಖಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಲಿಗಂಜ್ ವಿಧಾನ ಸಭಾ ಕ್ಷೇತ್ರದ ಭಾಗ. ಈ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಮುಖೇಶ್ ರಜಪೂತ್ ಇಲ್ಲಿನ ಬಿಜೆಪಿ ಅಭ್ಯರ್ಥಿ.

ವೀಡಿಯೊದಲ್ಲಿ ಕಂಡು ಬಂದ ಬಾಲಕ ರಾಜನ್ ಸಿಂಗ್ ಠಾಕೂರ್. ‘‘ಆತನ ಪ್ರಾಯ 16’’ ಎಂದು ರಾಜನ್ ನ ತಂದೆ ಅನಿಲ್ ಸಿಂಗ್ ಠಾಕೂರ್ scroll.in ಗೆ ತಿಳಿಸಿದ್ದಾರೆ. ಅವರು ಖಿರಿ ಪಮರಾನ್ನ ಗ್ರಾಮ ಪ್ರಧಾನ್ ಹಾಗೂ ಬಿಜೆಪಿಯ ಸದಸ್ಯ.

ಈ ವೀಡಿಯೊದಲ್ಲಿ ತನ್ನ ಪುತ್ರನನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ಬಾಲಕನ ತಂದೆ ಹೇಳಿದ್ದಾರೆ.

ವಾಸ್ತವವಾಗಿ ಮತ ಯಂತ್ರವನ್ನು ಪರಿಶೀಲನೆ ನಡೆಸುತ್ತಿರುವ ಸಂದರ್ಭ ಆತ (ರಾಜನ್ ಸಿಂಗ್ ಠಾಕೂರ್) ಮತ ಚಲಾಯಿಸಿದ್ದಾನೆ ಎಂದು ಅವರು ಒಂದೆಡೆ ಪ್ರತಿಪಾದಿಸಿದ್ದಾರೆ. ಇನ್ನೊಂದೆಡೆ ಅವರು, ‘‘ಆತ ಗ್ರಾಮದಲ್ಲಿ ಭಿನ್ನ ಸಾಮರ್ಥ್ಯರ ಪರವಾಗಿ ಮತ ಹಾಕಿದ್ದಾನೆ. ಆದರೆ, ಆ ಭಾಗವನ್ನು ಎಡಿಟ್ ಮಾಡಲಾಗಿದೆ’’ ಎಂದಿದ್ದಾರೆ.

ಅನಿಲ್ ಸಿಂಗ್ ಠಾಕೂರ್ 2021ರಿಂದ ಖಿರಿ ಪಮರಾನ್ ಗ್ರಾಮದ ಗ್ರಾಮ ಪ್ರಧಾನರಾಗಿದ್ದಾರೆ. ‘‘ನಾನು ಹುಟ್ಟಿನಿಂದಲೇ ಬಿಜೆಪಿಯೊಂದಿದ್ದೇನೆ’’ ಎಂದು ಅನಿಲ್ ಸಿಂಗ್ ಠಾಕೂರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News