ಸೆಬಿ ಮುಖ್ಯಸ್ಥರ ವಿರುದ್ಧದ ಆರೋಪದ ಕುರಿತು ತನಿಖೆ ನಡೆಸಬೇಕೆಂದ ಬಿಜೆಪಿ ನಾಯಕ ಅಣ್ಣಾಮಲೈ

Update: 2024-08-12 09:29 GMT

ಕೆ ಅಣ್ಣಾಮಲೈ (Photo: PTI)

ಚೆನ್ನೈ: ಅಮೆರಿಕಾದ ಹಿಂಡೆನ್‌ಬರ್ಗ್‌ ಸಂಸ್ಥೆಯು ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್‌ ವಿರುದ್ಧ ಹೊರಿಸಿರುವ ಆರೋಪಗಳ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ, ಅದೇ ಸಮಯ ಹಿಂಡನ್‌ಬರ್ಗ್‌ ಈ ಹಿಂದೆ ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಹೊರಿಸಿರುವ ಆರೋಪಗಳು ನಿರಾಧಾರ ಎಂದು ಹೇಳಿದ್ದಾರೆ.

ತನ್ನ ಲಾಭಕ್ಕಾಗಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸುವ ಯತ್ನವನ್ನು ಹಿಂಡೆನ್‌ಬರ್ಗ್‌ ಮಾಡುತ್ತಿದೆ ಎಂದು ಆರೋಪಿಸಿರುವ ಅಣ್ಣಾಮಲೈ, ಹಿಂಡೆನ್‌ಬರ್ಗ್‌ ಆರೋಪಗಳನ್ನು ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

“ಹಿಂಡೆನ್‌ಬರ್ಗ್‌ ಪತ್ರಕರ್ತ ಅಥವಾ ಎನ್‌ಜಿಒ ಅಲ್ಲ ಬದಲು ಷೇರುಗಳ ಶಾರ್ಟ್‌ ಸೆಲ್ಲಿಂಗ್‌ ಏಜಂಟ್‌, ಅವರು ಇಂತಹ ವರದಿಗಳನ್ನು ಬಿಡುಗಡೆಗೊಳಿಸಿ, ಹೂಡಿಕೆದಾರರಲ್ಲಿ ಭೀತಿ ಸೃಷ್ಟಿಸುತ್ತಾರೆ, ಮತ್ತು ಇಂತಹ ಸನ್ನಿವೇಶಗಳ ಲಾಭ ಪಡೆಯುತ್ತಾರೆ ಹಾಗೂ ಕೋಟ್ಯಂತರ ರೂಪಾಯಿ ಲಾಭ ಗಳಿಸುತ್ತಾರೆ, ಹಿಂಡೆನ್‌ಬರ್ಗ್‌ ವಿಚಾರ ಇಷ್ಟೇ,” ಎಂದು ಅಣ್ಣಾಮಲೈ ಹೇಳಿದರು.

“ಹಿಂದೆ ಕೂಡ ಹಿಂಡೆನ್‌ಬರ್ಗ್‌ ವರದಿ ಬಂದಿತ್ತು ಮತ್ತು ಸುಪ್ರೀಂ ಕೋರ್ಟ್‌ ನೇಮಿತ ಸಮಿತಿಯು ಆರೋಪಗಳು ನಿರಾಧಾರವೆಂದಿತ್ತು. ಆದರೆ ಅದನ್ನು ನಿರ್ಲಕ್ಷಿಸಬೇಕೆಂದು ನಾನು ಹೇಳುವುದಿಲ್ಲ. ಅವರು ಹಿಂದೆ ಮಾಡಿದ ಸುಳ್ಳು ಆರೋಪಗಳನ್ನು ವಿಮರ್ಶಿಸದೆ ಈಗಿನ ವರದಿಯ ತನಿಖೆ ನಡೆಸಬೇಕು, ಈ ರೀತಿ ಆಗಾಗ ಸುಳ್ಳು ಆತಂಕ ಸೃಷ್ಟಿಸುವುದಕ್ಕೆ ಹಿಂಡೆನ್‌ಬರ್ಗ್‌ ಹೆಸರು ಪಡೆದಿದೆ,” ಎಂದು ಅಣ್ಣಾಮಲೈ ಹೇಳಿದರು.

“ಸೆಬಿ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಯಲಿ, ಆರೋಪ ನಿಜವೆಂದಾದಲ್ಲಿ ಕ್ರಮ ಖಂಡಿತಾ ಇರುವುದು. ಹಿಂಡೆನ್‌ಬರ್ಗ್‌ ಹಿಂದೆ ಕೂಡ ಸುಳ್ಳು ಹೇಳಿಕೆಗಳನ್ನು ನೀಡಿದ್ದರೂ ಜವಾಬ್ದಾರಿಯುತ ಸರ್ಕಾರ ಇಂತಹ ವರದಿಗಳ ತನಿಖೆ ನಡೆಸಬೇಕು,” ಎಂದು ಹೇಳಿದ ಅಣ್ಣಾಮಲೈ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಗತಿಗೆ ಧಕ್ಕೆ ತರುವ ದೊಡ್ಡ ಷಡ್ಯಂತ್ರವೂ ಇರಬಹುದು, ಎಂದು ಅಭಿಪ್ರಾಯ ಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News