ಗಣಿಗಾರಿಕೆ ಕಂಪನಿಗಳ ಮೊದಲ ಆಯ್ಕೆ ಬಿಜೆಪಿ : ಚುನಾವಣಾ ಬಾಂಡ್ ದತ್ತಾಂಶಗಳಿಂದ ಬಹಿರಂಗ
ಹೊಸದಿಲ್ಲಿ : ಕೇಂದ್ರದ ಆಡಳಿತಾರೂಢ ಬಿಜೆಪಿಯು ರಾಜಕೀಯ ದೇಣಿಗೆಗಳಿಗಾಗಿ ಪ್ರಮುಖ ಗಣಿಗಾರಿಕೆ ಮತ್ತು ಮೂಲಸೌಕರ್ಯ ಕಂಪನಿಗಳ ಮೊದಲ ಆಯ್ಕೆಯಾಗಿದ್ದು, ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಎರಡನೇ ಆಯ್ಕೆಯಾಗಿದೆ ಎನ್ನುವುದನ್ನು ಚುನಾವಣಾ ಆಯೋಗವು ಗುರುವಾರ ಬಿಡುಗಡೆಗೊಳಿಸಿರುವ ಚುನಾವಣಾ ಬಾಂಡ್ ಗಳ ಸಂಪೂರ್ಣ ದತ್ತಾಂಶಗಳು ತೋರಿಸಿವೆ.
ಎಸ್ಬಿಐ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಿವರಗಳು ಖರೀದಿಸಲಾದ ಮತ್ತು ನಗದೀಕರಿಸಲಾದ ಚುನಾವಣಾ ಬಾಂಡ್ ಗಳಿಂದ ತಮಿಳುನಾಡು,ಆಂಧ್ರಪ್ರದೇಶ ಮತ್ತು ಒಡಿಶಾಗಳಂತಹ ವಿವಿಧ ರಾಜ್ಯಗಳ ಆಡಳಿತಾರೂಢ ಪಕ್ಷಗಳಿಗೆ ಲಾಭವಾಗಿದೆ ಎಂದು ತೋರಿಸಿವೆ.
ತೆಲಂಗಾಣ ಮೂಲದ ಮೇಘಾ ಇಂಜಿನಿಯರಿಂಗ್ ತನ್ನ ಮೊದಲ ಆಯ್ಕೆಯಾಗಿ ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿಗೆ 519 ಕೋಟಿ ರೂ.ಗಳನ್ನು ನೀಡಿದ್ದರೆ ರಾಜ್ಯದ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್)ಗೆ 150 ಕೋಟಿ ರೂ.ಗಳನ್ನು ನೀಡಿದೆ. ಕಂಪನಿಯು ದೇಶಾದ್ಯಂತ ವಿವಾದಾತ್ಮಕ ಮೂಲಸೌಕರ್ಯ ನಿರ್ಮಾಣ ಟೆಂಡರ್ಗಳನ್ನು ಪಡೆದುಕೊಂಡಿದ್ದು, ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಆರೋಪಗಳನ್ನು ಎದುರಿಸುತ್ತಿದೆ. ಕಾಳೇಶ್ವರಂ ಏತ ನೀರಾವರಿ ಯೋಜನೆ ಮತ್ತು ಹಾಲಿ ಪ್ರಗತಿಯಲ್ಲಿರುವ ರೆಜಿಲಾ ಸುರಂಗ ಕಂಪನಿಯ ಪ್ರಮುಖ ವಿವಾದಾತ್ಮಕ ಯೋಜನೆಗಳಲ್ಲಿ ಸೇರಿವೆ.
ಪ್ರಮುಖ ಗಣಿಗಾರಿಕೆ ಮತ್ತು ಮೂಲಸೌಕರ್ಯ ಕಂಪನಿಗಳು ಪರಿಸರ ಮತ್ತು ಸಾಮಾಜಿಕ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಥಳೀಯರ ವಿರೋಧಗಳನ್ನು ಎದುರಿಸಿದ್ದವು ಎನ್ನುವುದನ್ನು ಆರಂಭಿಕ ವಿಶ್ಲೇಷಣೆಯು ತೋರಿಸಿದೆ.
ದೇಶದಲ್ಲಿ ಪರಿಸರ ನಿಯಮಗಳ ಉಲ್ಲಂಘನೆ ಮತ್ತು ಅವುಗಳನ್ನು ಬುಡಮೇಲುಗೊಳಿಸುವಲ್ಲಿ ಕುಖ್ಯಾತವಾಗಿರುವ ಪ್ರಮುಖ ಗಣಿಗಾರಿಕೆ ಕಂಪನಿ ವೇದಾಂತ ಲಿಮಿಟೆಡ್ನ ಮೊದಲ ಆಯ್ಕೆ ಬಿಜೆಪಿ (226 ಕೋಟಿ ರೂ.)ಯಾಗಿದ್ದು, ಕಾಂಗ್ರೆಸ್ (104 ಕೋಟಿ ರೂ.) ಮತ್ತು ಬಿಜೆಡಿ (40 ಕೋಟಿ ರೂ.) ನಂತರದ ಆಯ್ಕೆಗಳಾಗಿದ್ದವು. ದೇಶದಲ್ಲಿಯ ಪರಿಸರ ಕಾನೂನುಗಳನ್ನು ದುರ್ಬಲಗೊಳಿಸಲು ಲಾಬಿ ನಡೆಸುತ್ತಿರುವ ಆರೋಪವೂ ಕಂಪನಿಯ ಮೇಲಿದೆ. ವೇದಾಂತ ಕಂಪನಿಯ ಅಂಗಸಂಸ್ಥೆಯೊಂದು ಒಡಿಶಾದ ಲಾಂಜಿಗಡದಲ್ಲಿ ಅಲ್ಯುಮಿನಿಯಂ ಸಂಸ್ಕರಣಾಗಾರವನ್ನು ನಡೆಸುತ್ತಿದ್ದು,ಇದು ನಿಯಮಗಿರಿ ಬೆಟ್ಟಗಳಲ್ಲಿ ವಾಯು ಮತ್ತು ಜಲಮಾಲಿನ್ಯಕ್ಕೆ ಕಾರಣವಾಗಿದೆ.
ಆದಿತ್ಯ ಬಿರ್ಲಾ ಗ್ರೂಪ್ನ ಉತ್ಕಲ ಅಲ್ಯುಮಿನಾ ಇಂಟರ್ನ್ಯಾಷನಲ್ ಲಿ.ಅತ್ಯಂತ ಹೆಚ್ಚಿನ ದೇಣಿಗೆಗಳನ್ನು ಬಿಜೆಪಿ (75 ಕೋಟಿ ರೂ.) ಮತ್ತು ಬಿಜೆಡಿ (54 ಕೋಟಿ ರೂ.)ಗೆ ನೀಡಿದೆ. ಕಂಪನಿಯು ಹಿಂದೆ ತನ್ನ ಅಲ್ಯುಮಿನಿಯಂ ಗಣಿಗಾರಿಕೆಗಾಗಿ ಭಾರೀ ಪ್ರತಿಭಟನೆಗಳನ್ನು ಎದುರಿಸಿತ್ತು. ಒಡಿಶಾದ ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್ನ ಬರಿಜೋಲಾ ಗ್ರಾಮದಲ್ಲಿ ಕಂಪನಿಯ ವಿರುದ್ಧ ಪ್ರತಿಭಟನೆಗಳ ಸಂದರ್ಭದಲ್ಲಿ ಪೋಲಿಸರ ಗೋಲಿಬಾರ್ ನಿಂದ ನಾಲ್ವರು ಆದಿವಾಸಿಗಳು ಕೊಲ್ಲಲ್ಪಟ್ಟಿದ್ದರು.
ಒಡಿಶಾ ಮೂಲದ ಕಬ್ಬಿಣ ಅದಿರು ಗಣಿಗಾರಿಕೆ ಕಂಪನಿ ಕೆ.ಜೆ.ಎಸ್ ಅಹ್ಲುವಾಲಿಯಾ ಹಾಗೂ ಗಣಿಗಾರಿಕೆ ಮತ್ತು ಉಕ್ಕು ಕಂಪನಿ ರುಂಗಟಾ ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿಗೆ ಅನುಕ್ರಮವಾಗಿ 14 ಕೋಟಿ ರೂ. ಮತ್ತು 50 ಕೋಟಿ ರೂ.ಗಳನ್ನು ನೀಡಿವೆ.
ಉತ್ತರಾಖಂಡ್ ನಲ್ಲಿ ಸುರಂಗಗಳು ಮತ್ತು ರಸ್ತೆಗಳ ನಿರ್ಮಾಣದಲ್ಲಿ ತೊಡಗಿಕೊಂಡಿರುವ ನವಯುಗ ಇಂಜಿನಿಯರಿಂಗ್ ಕಂಪನಿಯು ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿಗೆ 55 ಕೋಟಿ ರೂ.ಗಳನ್ನು ನೀಡಿದೆ. ಸಿಲ್ಕ್ಯಾರಾ ಸುರಂಗವು ಕುಸಿದು ಬಿದ್ದು 41 ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದ ದುರ್ಘಟನೆಗೆ ಇದೇ ಕಂಪನಿಯು ಹೊಣೆಯಾಗಿತ್ತು.