ಬಿಜೆಪಿಯ ಪ್ರಥಮ ಪಟ್ಟಿ: ದ್ವೇಷ ಭಾಷಣ ಕುಖ್ಯಾತರಿಗೆ ಟಿಕೆಟ್‌ ಇಲ್ಲ!

Update: 2024-03-03 08:43 GMT

ಪ್ರಜ್ಞಾ ಸಿಂಗ್ ಠಾಕೂರ್,  ಪರ್ವೇಶ್ ಸಾಹಿಬ್ ಸಿಂಗ್ ವರ್ಮ ಹಾಗೂ ರಮೇಶ್ ಬಿಧೂರಿ| Photo: PTI  

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ 195 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೆಲವು ಕೈಬಿಟ್ಟಿರುವ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹೆಸರುಗಳಿಗಿಂತ ಪ್ರಾಮುಖ್ಯತೆ ಪಡೆದಿವೆ. ದ್ವೇಷ ಭಾಷಣಕ್ಕೆ ಕುಖ್ಯಾತರಾದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ದಿಲ್ಲಿಯ ಹಾಲಿ ಸಂಸದರಾದ ಪರ್ವೇಶ್ ಸಾಹಿಬ್ ಸಿಂಗ್ ವರ್ಮ ಹಾಗೂ ರಮೇಶ್ ಬಿಧೂರಿ ಈ ಪೈಕಿ ಪ್ರಮುಖ ಹೆಸರುಗಳಾಗಿವೆ.

ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಬಿಜೆಪಿಗೆ ಮುಜುಗರನ್ನುಂಟು ಮಾಡುತ್ತಿದ್ದ ಈ ಮೂವರು ನಾಯಕರ ಹೆಸರು ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿಲ್ಲ.

ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ಞಾ ಸಿಂಗ್ ಬದಲಿಗೆ ಅಲೋಕ್ ಶರ್ಮರನ್ನು ಬಿಜೆಪಿ ಕಣಕ್ಕಿಳಿಸಿದೆ. 2008ರಲ್ಲಿ ನಡೆದಿದ್ದ ಮಾಲೇಗಾಂವ್ ಬಾಂಬ್ ಸ್ಫೋಟದಲ್ಲಿ ಪ್ರಮುಖ ಆರೋಪಿಯಾಗಿದ್ದ ಪ್ರಜ್ಞಾ ಸಿಂಗ್, ತಮ್ಮ ಐದು ವರ್ಷಗಳ ಸಂಸದಗಿರಿ ಅವಧಿಯಲ್ಲಿ ಮತ್ತಷ್ಟು ವಿವಾದಾತ್ಮಕ ಹೇಳಿಕೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಆರೋಗ್ಯ ಸಮಸ್ಯೆಯ ನೆಪದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ ಪ್ರಜ್ಞಾ, ಕಬಡ್ಡಿ ಆಡುತ್ತಿರುವುದು ಹಾಗೂ ಗಾರ್ಬಾ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ದೃಶ್ಯಗಳಲ್ಲಿ ಕಂಡು ಬಂದು, ಬಿಜೆಪಿ ಮತ್ತಷ್ಟು ಮುಜುಗರಕ್ಕೀಡಾಗಿತ್ತು. ಮಹಾತ್ಮ ಗಾಂಧಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ಮಹಾನ್ ದೇಶಪ್ರೇಮಿ ಎಂದು ಕೂಡ ಪ್ರಜ್ಞಾ ಠಾಕೂ‍ರ್ ಬಣ್ಣಿಸಿದ್ದರು.

ಪಶ್ಚಿಮ ದಿಲ್ಲಿಯ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮರನ್ನು ಪ್ರಥಮ ಪಟ್ಟಿಯಲ್ಲಿ ಕೈಬಿಟ್ಟಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಎರಡು ಬಾರಿಯ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಸಾಹಿಬ್ ಸಿಂಗ್ ವರ್ಮರ ಪುತ್ರನಾದ 46 ವರ್ಷದ ಪರ್ವೇಶ್ ಸಾಹಿಬ್ ಸಿಂಗ್ ವರ್ಮ ತಮ್ಮ ಕಿಡಿ ಹಚ್ಚುವ ಹೇಳಿಕೆಗಳಿಂದ ಸುದ್ದಿಯಾಗಿದ್ದರು.

2020ರ ದಿಲ್ಲಿ ಚುನಾವಣೆಗೂ ಮುನ್ನ, ಒಂದು ವೇಳೆ ಬಿಜೆಪಿಯೇನಾದರೂ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದರೆ, ಕೇವಲ ಒಂದು ಗಂಟೆಯಲ್ಲಿ ಶಹೀನ್ ಬಾಗ್ ಪ್ರತಿಭಟನಾಕಾರರನ್ನು ತೆರವುಗೊಳಿಸಲಾಗುವುದು ಎಂದು ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮೊದಲ ಪಟ್ಟಿಯಲ್ಲಿ ಮತ್ತೊಬ್ಬ ಟಿಕೆಟ್‌ ವಂಚಿತ ವ್ಯಕ್ತಿ ದಕ್ಷಿಣ ದಿಲ್ಲಿಯ ಸಂಸದ ರಮೇಶ್ ಬಿಧೂರಿ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಲೋಕಸಭೆಯಲ್ಲಿನ ಚರ್ಚೆಯ ಸಂದರ್ಭದಲ್ಲಿ ಅಮ್ರೋಹ್ ಸಂಸದ ದಾನಿಶ್ ಅಲಿ ವಿರುದ್ಧ ರಮೇಶ್ ಬಿಧೂರಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅವರ ಅವಹೇಳನಾಕಾರಿ ಮಾತುಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ನಂತರ ಅವರು ತಮ್ಮ ಮಾತುಗಳಿಗೆ ಕ್ಷಮೆ ಯಾಚಿಸಿದ್ದರು. ಈಗ ಬಿಜೆಪಿ ಮೊದಲ ಪಟ್ಟಿಯಲ್ಲಿ ಅವರ ಹೆಸರು ಇಲ್ಲ.

ಇವರೊಂದಿಗೆ ಮತ್ತಿಬ್ಬರು ಪ್ರಮುಖ ನಾಯಕರಾದ ಮೀನಾಕ್ಷಿ ಲೇಖಿ ಹಾಗೂ ಹರ್ಷ್ ವರ್ಧನ್ ಅವರನ್ನೂ ಬಿಜೆಪಿಯ ಪ್ರಥಮ ಪಟ್ಟಿಯಿಂದ ಕೈಬಿಡಲಾಗಿದೆ. ಆ ಮೂಲಕ ಬಿಜೆಪಿಯ 195 ಅಭ್ಯರ್ಥಿಗಳ ಪ್ರಥಮ ಪಟ್ಟಿಯಿಂದ ಒಟ್ಟು 33 ಹಾಲಿ ಸಂಸದರನ್ನು ಕೈಬಿಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News