ಮಾಜಿ ಆರೆಸ್ಸೆಸ್‌ ಪ್ರಚಾರಕ, ಬಿಜೆಪಿಯ ಹಿರಿಯ ನಾಯಕ ಓಂ ಪ್ರಕಾಶ್ ಮಾಥೂರ್ ಸಿಕ್ಕಿಂನ ರಾಜ್ಯಪಾಲರಾಗಿ ನೇಮಕ

Update: 2024-07-28 07:56 GMT

ಓಂ ಪ್ರಕಾಶ್ ಮಾಥೂರ್ (Photo: PTI)

ಜೈಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮಾಜಿ ಪ್ರಚಾರಕ ಹಾಗೂ ರಾಜಸ್ಥಾನ ಬಿಜೆಪಿಯ ಹಿರಿಯ ನಾಯಕ ಓಂ ಪ್ರಕಾಶ್ ಮಾಥೂರ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಓಂ ಪ್ರಕಾಶ್ ಮಾಥೂರ್ ಅವರು ರಾಜಸ್ಥಾನ ಬಿಜೆಪಿಯ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದರು. ಸದ್ಯ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಓಂ ಪ್ರಕಾಶ್ ಮಾಥೂರ್, ತಮ್ಮನ್ನು ಸಾಂವಿಧಾನಿಕ ಹುದ್ದೆಗೆ ನೇಮಿಸಿರುವುದರಿಂದ ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುವುದಾಗಿ ಪ್ರಕಟಿಸಿದ್ದಾರೆ.

ರಾಜಸ್ಥಾನದ ಪಾಲಿ ಜಿಲ್ಲೆಯ ಬಾಲಿ ಗ್ರಾಮದವರಾದ 72 ವರ್ಷದ ಓಂ ಪ್ರಕಾಶ್ ಮಾಥೂರ್, ಬಿಜೆಪಿಯ ಸೈದ್ಧಾಂತಿಕ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದ್ದರು. ರಾಜಕಾರಣದಲ್ಲಿ ಬಿಜೆಪಿಯ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿಯ ನಾಯಕ ಭೈರೂನ್ ಸಿಂಗ್ ಶೆಖಾವತ್ ಅವರನ್ನು ಮುನ್ನೆಲೆಗೆ ತಂದರು.

ಓಂ ಪ್ರಕಾಶ್ ಮಾಥೂರ್ ಅವರು ಗುಜರಾತ್ ಬಿಜೆಪಿಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಕಳೆದ ವರ್ಷ ಬಿಜೆಪಿಯು ರಾಜಸ್ಥಾನದಲ್ಲಿ ಅಧಿಕಾರಕ್ಕೆ ಮರಳುವಲ್ಲಿ ಓಂ ಪ್ರಕಾಶ್ ಮಾಥೂರ್ ಕೂಡಾ ಪ್ರಮುಖರಾಗಿದ್ದರು ಎಂದು ಹೇಳಲಾಗಿದೆ. ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನಕ್ಕೆ ಭಜನ್ ಲಾಲ್ ಶರ್ಮರನ್ನು ನೇಮಕ ಮಾಡುವುದಕ್ಕೂ ಮುನ್ನ, ಸಂಭವನೀಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಓಂ ಪ್ರಕಾಶ್ ಮಾಥೂರ್ ಅವರ ಹೆಸರೂ ಕೇಳಿ ಬಂದಿತ್ತು.

ಸಿಕ್ಕಿಂ ರಾಜ್ಯಪಾಲರಾಗಿ ನೇಮಕಗೊಂಡಿರುವ ಓಂ ಪ್ರಕಾಶ್ ಮಾಥೂರ್ ಅವರನ್ನು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮ ಅಭಿನಂದಿಸಿದ್ದಾರೆ.

ಹಾಲಿ ಸಿಕ್ಕಿಂ ರಾಜ್ಯಪಾಲರಾಗಿರುವ ಲಕ್ಷ್ಮಣ್ ಪ್ರಸಾದ್ ಆಚಾರ್ಯ ತೆರವುಗೊಳಿಸಲಿರುವ ಹುದ್ದೆಗೆ ಓಂ ಪ್ರಕಾಶ್ ಮಾಥೂರ್ ನೇಮಕಗೊಂಡಿದ್ದು, ಲಕ್ಷ್ಮಣ್ ‍ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಮಣಿಪುರದ ಹೆಚ್ಚುವರಿ ಹೊಣೆಯನ್ನೂ ಅವರಿಗೆ ನೀಡಲಾಗಿದೆ.

ಈ ನೇಮಕದೊಂದಿಗೆ ಇನ್ನಿತರ ರಾಜ್ಯಪಾಲ ಹುದ್ದೆಗಳಿಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಅಸ್ಸಾಂನ ರಾಜ್ಯಪಾಲರಾದ ಗುಲಾಬ್ ಚಂದ್ ಕಟಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಅವರಿಗೆ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಹೊಣೆಯನ್ನೂ ವಹಿಸಲಾಗಿದೆ.

ರಾಜಸ್ಥಾನದ ರಾಜ್ಯಪಾಲರಾಗಿ ಹರಿಭಾವು ಕಿಶನ್ ರಾವ್ ಬಾಗ್ಡೆ, ತೆಲಂಗಾಣದ ರಾಜ್ಯಪಾಲರಾಗಿ ಜಿಷ್ಣು ದೇವ್ ವರ್ಮ ಹಾಗೂ ಝಾರ್ಖಂಡ್ ರಾಜ್ಯಪಾಲರಾಗಿ ಸಂತೋಷ್ ಕುಮಾರ್ ಗಂಗ್ವಾರ್ ನೇಮಕಗೊಂಡಿದ್ದಾರೆ. ಇವರೊಂದಿಗೆ ಛತ್ತೀಸ್ ಗಢ ರಾಜ್ಯಪಾಲರನ್ನಾಗಿ ರಮಣ್ ದೇಕಾ ಹಾಗೂ ಸಿ.ಎಚ್.ವಿಜಯಶಂಕರ್ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ತೆಲಂಗಾಣದ ಹೆಚ್ಚುವರಿ ಹೊಣೆಯೊಂದಿಗೆ ಜಾರ್ಖಂಡ್ ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

“ರಾಜ್ಯಪಾಲರ ಹುದ್ದೆಗೆ ನೇಮಕಗೊಂಡಿರುವವರು ತಮ್ಮ ಅಧಿಕಾರ ಗ್ರಹಣ ಮಾಡಿದಾಗಿನಿಂದ ಈ ನೇಮಕಾತಿ ಆದೇಶವು ಜಾರಿಗೆ ಬರಲಿದೆ” ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News