ಸಮಾನ ಶಿಕ್ಷಣ ಮಂಡಳಿ, ಏಕರೂಪದ ಪಠ್ಯಕ್ರಮಕ್ಕೆ ಸಿಬಿಎಸ್ಇ ವಿರೋಧ

Update: 2023-10-01 16:34 GMT

ಹೊಸದಿಲ್ಲಿ : ದೇಶಾದ್ಯಂತ ಸಮಾನ ಶಿಕ್ಷಣ ಮಂಡಳಿ ಹಾಗೂ ಏಕರೂಪದ ಪಠ್ಯಕ್ರಮವನ್ನು ಜಾರಿಗೊಳಿಸಿದಲ್ಲಿ ಸ್ಥಳೀಯ ಸಂಸ್ಕೃತಿಗಳು ಹಾಗೂ ಪರಿಕಲ್ಪನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಸಮರ್ಥವಾಗಲಾರದು ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಶನಿವಾರ ದಿಲ್ಲಿ ಹೈಕೋರ್ಟ್ ಗೆ ತಿಳಿಸಿದೆ.

ಸಮಾನ ಶಿಕ್ಷಣ ಮಂಡಳಿಯನ್ನು ಸ್ಥಾಪಿಸುವ ಮೂಲಕ ದೇಶಾದ್ಯಂತ ಏಕರೂಪದ ಪಠ್ಯಕ್ರಮ ಜಾರಿಗೆ ಆಗ್ರಹಿಸಿ ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡ ಎ.ಕೆ. ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಗೆ ಸಿಬಿಎಸ್ಇ ಹೀಗೆ ಪ್ರತಿಕ್ರಿಯಿಸಿದೆ.

ಸಿಬಿಎಸ್ಇ, ಐಸಿಎಸ್ಇ ಹಾಗೂ ರಾಜ್ಯ ಶಿಕ್ಷಣ ಮಂಡಳಿಗಳು ವಿಭಿನ್ನವಾದ ಪಠ್ಯಗಳನ್ನು ಹೊಂದಿರುವುದು ಏಕಪಕ್ಷೀಯವಾದುದು ಹಾಗೂ ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾದುದಾಗಿದೆ. ಪ್ರವೇಶ ಪರೀಕ್ಷೆಗಳು ಸಮಾನ ಪಠ್ಯಕ್ರಮವನ್ನು ಹೊಂದಿವೆ, ಆದರೆ ಶಾಲಾ ಶಿಕ್ಷಣ ಮಂಡಳಿಗಳು ಬೇರೆ ಬೇರೆ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವುದರಿಂದ ವಿದ್ಯಾರ್ಥಿಗಳು ಸಮಾನವಾದ ಅವಕಾಶ ಪಡೆಯುವುದಕ್ಕೆ ತೊಡಕಾಗಲಿದೆ ಎಂದು ಅರ್ಜಿಯು ಪ್ರತಿಪಾದಿಸಿತ್ತು.

ಶಿಕ್ಷಣದ ಹಕ್ಕು ಕಾಯ್ದೆಯಡಿ ರಾಷ್ಟ್ರೀಯ ಪಠ್ಯಕ್ರಮವನ್ನು ರೂಪಿಸುವ ಶೈಕ್ಷಣಿಕ ಪ್ರಾಧಿಕಾರವಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿಯು ಅಧಿಸೂಚನೆ ಹೊರಡಿಸಿದೆ. ಪಠ್ಯಕ್ರಮವನ್ನು ಸಿದ್ಧಪಡಿಸುವ ಬಗ್ಗೆ ರಾಜ್ಯ ಏಜೆನ್ಸಿಗಳೂ ಅಧಿಸೂಚನೆ ಹೊರಡಿಸಿವೆ.

ಬಹುತೇಕ ಶಾಲೆಗಳು ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಯಲ್ಲಿವೆ. ಆದುದರಿಂದ ಆಯಾ ರಾಜ್ಯ ಸರಕಾರಗಳ ಶಿಕ್ಷಣ ಇಲಾಖೆಗಳು ಪಠ್ಯಗಳು ಸಿದ್ಧಪಡಿಸುತ್ತವೆ ಹಾಗೂ ಪರೀಕ್ಷೆಗಳನ್ನು ಆಯೋಜಿಸುತ್ತವೆ ಎಂದು ಸಿಬಿಎಸ್ಇ ನ್ಯಾಯಾಲಯದ ಮುಂದೆ ನಿವೇದಿಸಿದೆ.

ರಾಜ್ಯ ಶೈಕ್ಷಣಿಕ ಸಂಶೋಧನಾ ಹಾಗೂ ತರಬೇತಿ ಮಂಡಳಿಗಳು ಮತ್ತು ರಾಜ್ಯ ಶೈಕ್ಷಣಿಕ ಮಂಡಳಿಗಳಿಗೆ ಎನ್ ಸಿ ಆರ್ ಟಿ ಪಠ್ಯಗಳನ್ನು ಹಾಗೂ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳುವ ಇಲ್ಲವೇ ಮಾರ್ಪಡಿಸಿಕೊಳ್ಳುವ ಅಥವಾ ರಾಷ್ಟ್ರೀಯ ಪಠ್ಯಕ್ರಮ ಕಾರ್ಯಚೌಕಟ್ಟನ್ನು ಆಧರಿಸಿ ತಮ್ಮದೇ ಆದ ಪಠ್ಯ ವಿಷಯಗಳನ್ನು ರೂಪಿಸಬಹುದಾಗಿದೆ ಎಂದು ಸಿಬಿಎಸ್ಇ ಹೇಳಿದೆ.

ನ್ಯಾಯವಾದಿ ಎ.ಕೆ. ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ, ಅದನ್ನು ವಜಾಗೊಳಿಸಬೇಕೆಂದು ಸಿಬಿಎಸ್ಇ ಮಂಡಳಿ ನ್ಯಾಯಾಲಯವನ್ನು ಆಗ್ರಹಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅ.10ಕ್ಕೆ ನಿಗದಿಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News