ದಿಲ್ಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ : ಪೊಲೀಸರಿಂದ ಪರಿಶೀಲನೆ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ 6 ಶಾಲೆಗಳಿಗೆ ಶುಕ್ರವಾರ ಬಾಂಬ್ ಬೆದರಿಕೆ ಹಾಕಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ವಾರದಲ್ಲಿ ನಡೆದ ಎರಡನೇ ಘಟನೆ ಇದಾಗಿದ್ದು, ಡಿಸೆಂಬರ್ 9ರಂದು ದಿಲ್ಲಿಯ ಕನಿಷ್ಠ 44 ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು.
ದಿಲ್ಲಿ ಪಬ್ಲಿಕ್ ಸ್ಕೂಲ್, ಸಲ್ವಾನ್ ಸ್ಕೂಲ್, ಮಾಡರ್ನ್ ಸ್ಕೂಲ್ ಮತ್ತು ಕೇಂಬ್ರಿಡ್ಜ್ ಸ್ಕೂಲ್ ಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಇದರಿಂದ ಮಕ್ಕಳನ್ನು ತರಗತಿಗಳಿಗೆ ಕಳುಹಿಸದಂತೆ ಪೋಷಕರಿಗೆ ಶಾಲೆಯಿಂದ ಸಂದೇಶಗಳನ್ನು ಕಳುಹಿಸಲಾಗಿದೆ.
"ವಿದ್ಯಾರ್ಥಿಗಳು ಶಾಲೆಗೆ ಬಂದಾಗ ನೀವು ಅವರ ಬ್ಯಾಗ್ ಗಳನ್ನು ಪರಿಶೀಲಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಬಾಂಬ್ ಗಳು ಕಟ್ಟಡಗಳನ್ನು ನಾಶಮಾಡುವ ಮತ್ತು ಜನರಿಗೆ ಹಾನಿ ಮಾಡುವಷ್ಟು ಶಕ್ತಿಯುತವಾಗಿವೆ. ಡಿಸೆಂಬರ್ 13 ಮತ್ತು 14 ಎರಡೂ ದಿನಗಳಲ್ಲಿ ಸ್ಪೋಟ ಸಂಭವಿಸಬಹುದು. ಡಿಸೆಂಬರ್ 14ರಂದು, ಕೆಲವು ಶಾಲೆಗಳಲ್ಲಿ ಶಿಕ್ಷಕ- ರಕ್ಷಕ ಸಭೆ ಇದೆ. ಈ ವೇಳೆ ಬಾಂಬ್ ಸ್ಫೋಟಿಸಲು ಉತ್ತಮವಾಗಿದೆ ಎಂದು ಇ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ಬಾಂಬ್ ಪತ್ತೆ ದಳದ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.