ʼಮಾವೋವಾದಿಗಳೊಂದಿಗೆ ನಂಟುʼ ಪ್ರಕರಣ: ಪ್ರೊ. ಜಿ.ಎನ್‌. ಸಾಯಿಬಾಬಾ, ಇತರ ಐವರನ್ನು ದೋಷಮುಕ್ತಗೊಳಿಸಿದ ಬಾಂಬೆ ಹೈಕೋರ್ಟ್

Update: 2024-03-05 06:01 GMT

ಪ್ರೊಫೆಸರ್‌ ಜಿ ಎನ್‌ ಸಾಯಿಬಾಬಾ (Photo: PTI)

ನಾಗ್ಪುರ್: ‌ ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆಂಬ ಆರೋಪದಡಿಯಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಪ್ರಕರಣ ಎದುರಿಸುತ್ತಿದ್ದ ದಿಲ್ಲಿ ವಿವಿಯ ಮಾಜಿ ಪ್ರೊಫೆಸರ್‌ ಜಿ ಎನ್‌ ಸಾಯಿಬಾಬಾ ಹಾಗೂ ಐದು ಮಂದಿ ಇತರರನ್ನು ಬಾಂಬೆ ಹೈಕೋರ್ಟಿನ ನಾಗ್ಪುರ್‌ ಪೀಠ ದೋಷಮುಕ್ತಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿನಯ್‌ ಜೋಷಿ ಮತ್ತು ವಾಲ್ಮೀಕಿ ಎಸ್‌ ಎ ಮೆನೆಜೆಸ್‌ ಅವರ ಪೀಠ ಈ ತೀರ್ಪು ಪ್ರಕಟಿಸಿದೆ.

ಜಿ ಎನ್‌ ಸಾಯಿಬಾಬಾ ಮತ್ತು ಇತರರನ್ನು 2014ರಲ್ಲಿ ಬಂಧಿಸಲಾಗಿತ್ತು. ಅವರು ಸಿಪಿಐ (ಮಾವೋವಾದಿ) ಗುಂಪಿಗೆ ಆರ್‌ಡಿಎಫ್‌ ನಂತಹ ಸಂಘಟನೆಗಳ ಮುಖಾಂತರ ಕೆಲಸ ಮಾಡುತ್ತಿದ್ದರು ಎಂದು ಮಹಾರಾಷ್ಟ್ರದ ಗಡ್ಚಿರೋಲಿಯ ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಪ್ರಾಸಿಕ್ಯೂಶನ್‌ ವಾದಿಸಿತ್ತು.

ವಶಪಡಿಸಿಕೊಳ್ಳಲಾದ ಕರಪತ್ರಗಳು ಮತ್ತು ಇತರ ಇಲೆಕ್ಟ್ರಾನಿಕ್‌ ವಸ್ತುಗಳು ದೇಶ-ವಿರೋಧಿ ಅಂಶಗಳನ್ನು ಒಳಗೊಂಡಿದ್ದವು ಎಂಬ ಸಾಕ್ಷ್ಯವನ್ನು ಪ್ರಾಸಿಕ್ಯೂಶನ್‌ ಅವಲಂಬಿಸಿತ್ತು. ಅಬುಜ್ಮದ್‌ ಅರಣ್ಯ ಪ್ರದೇಶದಲ್ಲಿ ಅಡಗಿರುವ ನಕ್ಸಲರಿಗೆಂದು ಸಾಯಿಬಾಬಾ ಅವರು 16ಜಿಬಿ ಮೆಮೊರಿ ಕಾರ್ಡ್‌ ನೀಡಿದ್ದರೆಂದೂ ಆರೋಪಿಸಲಾಗಿತ್ತು.

ಮಾರ್ಚ್‌ 2017ರಲ್ಲಿ ಅವರನ್ನು ಯುಎಪಿಎ ಇದರ ಸೆಕ್ಷನ್‌ 13, 18, 20, 38 ಹಾಗೂ 39 ಅಡಿಯಲ್ಲಿ ದೋಷಿ ಎಂದು ಘೋಷಿಸಲಾಗಿತ್ತು. ಆರೋಪಿಗಳಲ್ಲೊಬ್ಬಾತನಾದ ಪಾಂಡು ಪೊರಾ ನರೋಟೆ ಆಗಸ್ಟ್‌ 2022ರಲ್ಲಿ ಮೃತಪಟ್ಟಿದ್ದ. ಮಹೇಶ್‌ ಟಿರ್ಕಿ, ಹೇಮ್‌ ಕೇಶವದತ್ತ ಮಿಶ್ರಾ, ಪ್ರಶಾಂತ್‌ ರಾಹಿ ಮತ್ತು ವಿಜಯ್‌ ನನ್‌ ಟಿರ್ಕಿ ಇತರ ಆರೋಪಿಗಳು.

2022ರಲ್ಲಿ ಬಾಂಬೆ ಹೈಕೋರ್ಟಿನ ಇನ್ನೊಂದು ಪೀಠ ಅವರನ್ನು ದೋಷಿ ಎಂದು ಘೋಷಿಸಿದ್ದ ಆದೇಶವನ್ನು ಬದಿಗೆ ಸರಿಸಿತ್ತು ಹಾಗೂ ಇದಕ್ಕೆ ಪ್ರಕ್ರಿಯಾತ್ಮಕ ಕಾರಣಗಳನ್ನು ನೀಡಿತ್ತು.

ಆದರೆ ನಂತರ ಶನಿವಾರದ ವಿಶೇಷ ಕಲಾಪ ನಡೆಸಿದ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿ ಹೈಕೋರ್ಟ್‌ ಆದೇಶವನ್ನು ತಡೆಹಿಡಿದಿತ್ತು, ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ನಂತರ ಈ ಆದೇಶ ಹೊರಡಿಸಲಾಗಿತ್ತು.

ಈ ಪ್ರಕರಣವನ್ನು ಪುನರ್‌ ಪರಿಶೀಲಿಸುವಂತೆ ಬಾಂಬೆ ಹೈಕೋರ್ಟಿಗೆ ಸುಪ್ರೀಂ ಕೋರ್ಟ್‌ ಆಗ ಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News