ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ವಿರುದ್ಧ ಎಫ್‌ಐಆರ್‌ ರದ್ದು ಮಾಡಲು ಬಾಂಬೆ ಹೈಕೋರ್ಟ್ ಆದೇಶ

Update: 2023-09-08 18:15 GMT

ಬಾಂಬೆ ಹೈಕೋರ್ಟ್ | Photo: PTI 

ಮುಂಬೈ: ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ವಿರುದ್ಧ ಪುಣೆ ಹಾಗೂ ಮುಂಬೈಯಲ್ಲಿ ದಾಖಲಿಸಲಾದ ಎರಡು ಎಫ್‌ಐಆರ್‌ಗಳನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.

ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ ವರದಿಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಪುಣೆಯಲ್ಲಿ ಸಲ್ಲಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನ್ಯಾಯಮೂರ್ತಿಗಳಾದ ಅಜಯ್‌ಎಸ್.ಗಡ್ಕರಿ ಹಾಗೂ ಶರ್ಮಿಳಾ ದೇಶಮುಖ್ ಅವರನ್ನೊಳಗೊಂಡ ವಿಭಾಗೀಯ ಪೀಠವು ರದ್ದುಪಡಿಸಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಪ್ರಕರಣವು ವಿಚಾರಣೆಗೆ ಬಾಕಿಯಿರುವಾಗಲೇ ಅದರ ವಿರುದ್ಧ ಯಾವುದೇ ಪ್ರತಿಭಟನಾ ಅರ್ಜಿಯನ್ನು ಸಲ್ಲಿಸಲಾಗಿಲ್ಲ. ಮುಂಬೈಯಲ್ಲಿ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ಸರಕಾರವು ಶುಕ್ಲಾ ಅವರ ವಿಚಾರಣೆಗೆ ಅನುಮತಿಯನ್ನು ನೀಡಲ್ಲ. ರಶ್ಮಿ ಶುಕ್ಲಾ ವಿರುದ್ಧದ ತನಿಖೆಗೆ ಅನುಮತಿ ನೀಡಿರುವುದನ್ನು ಸಂಬಂಧಪಟ್ಟ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಕೂಡಾ ತಳ್ಳಿಹಾಕಿದ್ದಾರೆ ಎಂದು ರಾಜ್ಯ ಸರಕಾರ ಹಾಗೂ ಮುಂಬೈ ಪೊಲೀಸರ ನ್ಯಾಯವಾದಿ ಅಡ್ವೋಕೇಟ್‌ದನರಲ್ ಇರೇನ್ ಸರಾಫ್ ತಿಳಿಸಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಮಹಾವಿಕಾಸ್ ಅಘಾಡಿ ಸರಕಾರವು ಆಡಳಿತದಲ್ಲಿದ್ದಾಗ ರಾಜ್ಯ ಬೇಹುಗಾರಿಕೆಯ ಇಲಾಖೆಯ ದತ್ತಾಂಶಗಳು ಸೋರಿಕೆಯಾಗಿದ್ದವು. ದೇವೇಂದ್ರ ಫಡ್ನವೀಸ್ ಆಡಳಿತದಲ್ಲಿ ತಮ್ಮ ಕರೆಗಳನ್ನು ಅಕ್ರಮವಾಗಿ ಕದ್ದಾಲಿಕೆ ಮಾಡಲಾಗಿತ್ತೆಂದು ಕೆಲವು ಸಚಿವರು ಆರೋಪಿಸಿದ ಹಿನ್ನೆಲೆಯಲ್ಲಿ ಶುಕ್ಲಾ ವಿರುದ್ಧ ಮುಂಬೈಯಲ್ಲಿ ಎರಡು ಹಾಗೂ ಪುಣೆಯಲ್ಲಿ ಒಂದು ಎಫ್ ಐಆರ್ ದಾಖಲಾಗಿದ್ದವು.

ಶುಕ್ಲಾ ಅವರು ಫಡ್ನವೀಸ್ ನೇತೃತ್ವದ ಸರಕಾರದ ಆಡಳಿತದಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥೆಯಾಗಿದ್ದರು.

ತನ್ನ ಮೇಲಿನ ಆರೋಪವನ್ನು ನಿರಾಕರಿಸಿರುವ ಶುಕ್ಲಾ ಅವರು, ಮಹಾವಿಕಾಸ್ ಆಘಾಡಿ ಸರಕಾರದ ಆಡಳಿತದಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಗಳಲ್ಲಿ ವಿವಿಧ ರಾಜಕೀಯ ನಾಯಕರ ಶಾಮೀಲಾಗಿರುವುದನ್ನು ಬಹಿರಂಗಪಡಿಸುವ ವರದಿಯನ್ನು ಸಲ್ಲಿಸಿದ್ದಕ್ಕಾಗಿ ತನ್ನನ್ನು ಗುರಿ ಮಾಡಲಾಗಿದೆ ಎಂದು ಶುಕ್ಲಾ ತಿಳಿಸಿದರು. ಎರಡು ಪ್ರಕರಣಗಳಲ್ಲಿಯೂ ಶುಕ್ಲಾ ಅವರಿಗೆ ಬಂಧನದ ವಿರುದ್ಧ ಮಧ್ಯಂತರ ರಕ್ಷಣೆಯನ್ನು ನೀಡಲಾಗಿತ್ತು.

ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರದ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರ ಫೋನ್ ಕದ್ದಾಲಿಕೆಯ ಆರೋಪಕ್ಕೆ ಸಂಬಂಧಿಸಿ ಶ್ಲುಾ ವಿರುದ್ಧ ಪುಣೆಯ ಬುಂದೆ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News